ಭಟ್ಕಳ: ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದ ಕುಳವಾಡಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಭಟ್ಕಳ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ. ಜೂಜಾಟಕ್ಕೆ ಸಂಬಂಧಿಸಿದ ಸುಮಾರು ₹50 ಸಾವಿರ ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿತರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೋಳಿ ಹುಂಜಗಳ ಕಾಲುಗಳಿಗೆ ಕತ್ತಿಗಳನ್ನು ಕಟ್ಟಿ ಪರಸ್ಪರ ಕಾದಾಟಕ್ಕೆ ಬಿಟ್ಟು, ಅದರ ಮೇಲೆ ಹಣದ ಪಂತ ಹಾಕಿ ಜೂಜಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸೈ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ತಂಡ ದಾಳಿ ನಡೆಸಿದ ವೇಳೆ ಸ್ಥಳದಲ್ಲಿದ್ದ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿತು.
ದಾಳಿಯ ವೇಳೆ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರದ ಪರವಾಗಿ ಪಿಎಸೈ ಮಲ್ಲಿಕಾರ್ಜುನಯ್ಯ ಕೊರಾಣಿ ದೂರು ನೀಡಿದ್ದಾರೆ.
ಬಂಧಿತರು ಮಂಜುನಾಥ ಹೊನ್ನಪ್ಪ ನಾಯ್ಕ (35) ಬೆಳಕೆ ಪಿನ್ನುವಾಲ, ಶ್ರೀಕಾಂತ ಮಾದೇವ ನಾಯ್ಕ (27) ಮುಂಡಳ್ಳಿ ಹೊಸ್ಮನೆ, ದುರ್ಗಪ್ಪ ಹೊನ್ನಪ್ಪ ನಾಯ್ಕ (52) ಬೆಳಕೆ ಕಂಚಿಕೇರಿ, ಅನಂತ ನಾಗಪ್ಪ ಬಾಂದಿ (46) ಮಾರುಕೇರಿ, ಮಾಸ್ತಪ್ಪ ಮಂಜಪ್ಪ ನಾಯ್ಕ (65) ತಲಾಂದ ಹಾಗೂ ಮಂಜುನಾಥ ಶನಿಯಾರ ನಾಯ್ಕ (40) ಹಾರನಗದ್ದೆ–ಜಾಲಿ ನಿವಾಸಿಗಳಾಗಿದ್ದಾರೆ.
ಯಲ್ವಡಿಕವೂರ ನಿವಾಸಿ ಲಕ್ಷಣ ಬಡಿಯಾ ನಾಯ್ಕ ದಾಳಿಯ ವೇಳೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
PublicNext
08/06/2026 06:49 pm