ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಮಗನನ್ನು ತ್ಯಾಗ ಮಾಡಿದ ವೀರಮಾತೆಗೆ ರಾಷ್ಟ್ರಪತಿಗಳ ಸಾಂತ್ವನ - ಪ್ರೋಟೋಕಾಲ್ ಮೀರಿದ ಆಪ್ತ ಕ್ಷಣ!

ದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಕೀರ್ತಿ ಚಕ್ರ ಪ್ರದಾನ ಸಮಾರಂಭದಲ್ಲಿ ಹೃದಯ ಕಲಕುವ ಘಟನೆಯೊಂದು ನಡೆಯಿತು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಡುತ್ತಿದ್ದ ವೀರಮಾತೆಯೊಬ್ಬರ ಕಣ್ಣೀರನ್ನು ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಒರೆಸಿ ಸಾಂತ್ವನ ಹೇಳಿದರು. ಈ ಮಾನವೀಯ ಸ್ಪರ್ಶ ಇಡೀ ದೇಶವನ್ನೇ ಭಾವುಕಗೊಳಿಸಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಶೋಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮ ಲೆಫ್ಟಿನೆಂಟ್ ಶಶಾಂಕ್ ತಿವಾರಿ ಸೇರಿದಂತೆ ಒಟ್ಟು 07 ಮಂದಿಗೆ ದೇಶದ 2ನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಪ್ರದಾನ ಮಾಡಿದರು.

ಹುತಾತ್ಮ ಲೆಫ್ಟಿನೆಂಟ್ ಶಶಾಂಕ್ ತಿವಾರಿ ಕುಟುಂಬದ ಕಣ್ಣೀರು

ಸೇನಾ ಸೇವಾ ದಳ/ಸಿಕ್ಕಿಂ ಸ್ಕೌಟ್ಸ್‌ನ ಧೈರ್ಯಶಾಲಿ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್ ಶಶಾಂಕ್ ತಿವಾರಿ ಅವರು, ಉತ್ತರ ಸಿಕ್ಕಿಂನಲ್ಲಿ ಉಕ್ಕಿ ಹರಿಯುತ್ತಿದ್ದ ನದಿಗೆ ಸೇನಾ ವಾಹನ ಬಿದ್ದ ಸಂದರ್ಭದಲ್ಲಿ ಅಗ್ನಿವೀರ್ ಸ್ಟೀಫನ್ ಸುಬ್ಬಾ ಅವರ ಜೀವ ಉಳಿಸಿ ವೀರಮರಣವನ್ನಪ್ಪಿದ್ದರು. ಶಶಾಂಕ್ ಅವರ ತಂದೆ ಜಂಗ್ ಬಹದ್ದೂರ್ ತಿವಾರಿ ಮತ್ತು ತಾಯಿ ನೀತಾ ತಿವಾರಿ ಅವರು ತಮ್ಮ ಮಗನ ಅದಮ್ಯ ಸಾಹಸವನ್ನು ನೆನಪಿಸಿಕೊಂಡು ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.

ಇದೇ ರಕ್ಷಣಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಡೀ ದೇಶವನ್ನೇ ಭಾವುಕಗೊಳಿಸುವಂತಹ ಮತ್ತೊಂದು ಕ್ಷಣ ಎದುರಾಯಿತು.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಮಹಾರ್ ರೆಜಿಮೆಂಟ್‌ನ ಸಿಪಾಯಿ ಜಂಜಾಲ್ ಪ್ರವೀಣ್ ಪ್ರಭಾಕರ್ ಅವರಿಗೆ ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಕೀರ್ತಿ ಚಕ್ರ’ವನ್ನು ಮರಣೋತ್ತರವಾಗಿ ಪ್ರದಾನ ಮಾಡುವಾಗ ಈ ಘಟನೆ ನಡೆಯಿತು.

ಮಗನ ಕೊನೆಯ ನೆನಪಿನ ಶೌರ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತಾಯಿ ಶಾಲೂ ಪ್ರಭಾಕರ್ ಜಂಜಾಲ್ ಮತ್ತು ಪತ್ನಿ ಶಂಭಾಲಾ ಅವರು ವೇದಿಕೆಯತ್ತ ಬಂದರು. ಕೀರ್ತಿ ಚಕ್ರವನ್ನು ಕೈಯಲ್ಲಿ ಹಿಡಿಯುತ್ತಿದ್ದಂತೆ, ಮಗನ ಅಗಲಿಕೆಯ ದುಃಖವನ್ನು ತಾಯಿ ತಡೆಯಲಾಗದೆ ಕಣ್ಣೀರಿಡಲು ಪ್ರಾರಂಭಿಸಿದರು. ಆ ತಾಯಿಯ ಕಣ್ಣೀರು ಮತ್ತು ಮಗನನ್ನು ಕಳೆದುಕೊಂಡ ದುಃಖವನ್ನು ಕಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲಾ ಶಿಷ್ಟಾಚಾರಗಳನ್ನು ಕ್ಷಣಕಾಲ ಬದಿಗೆ ಸರಿಸಿ, ತಾವೇ ಸ್ವತಃ ಮುಂದೆ ಬಂದು, ಆ ವೀರಮಾತೆಯನ್ನು ಅತ್ಯಂತ ಆಪ್ತವಾಗಿ ಬಿಗಿದಪ್ಪಿಕೊಂಡು, ಅವರ ಹೆಗಲ ಮೇಲೆ ಸಮಾಧಾನಪಡಿಸುತ್ತಾ ಕಣ್ಣೀರು ಒರೆಸಿ ಸಾಂತ್ವನ ಹೇಳಿದರು.

ಇದು ಕೇವಲ ಪ್ರಶಸ್ತಿ ನೀಡುವ ಸಮಾರಂಭವಾಗಿ ಉಳಿಯದೇ, ಭಾರತ ಮಾತೆಯ ರಕ್ಷಣೆಗಾಗಿ ಮಗನನ್ನು ತ್ಯಾಗ ಮಾಡಿದ ತಾಯಿಗೆ ಇಡೀ ದೇಶವೇ ಕೃತಜ್ಞತೆ ಸಲ್ಲಿಸಿದ ಅತ್ಯುನ್ನತ ಕ್ಷಣವಾಗಿ ಮಾರ್ಪಟ್ಟಿತು.

ಸಿಪಾಯಿ ಜಂಜಾಲ್ ಪ್ರವೀಣ್ ಪ್ರಭಾಕರ್ ಅವರು 2024ರ ಜುಲೈ 6 ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಮುಖಾಮುಖಿ ಹೋರಾಟದಲ್ಲಿ ಇಬ್ಬರು ಉಗ್ರರನ್ನು ಸದೆಬಡಿದು ದೇಶಕ್ಕಾಗಿ ವೀರಮರಣ ಅಪ್ಪಿದ್ದರು.

ರಾಷ್ಟ್ರಪತಿ ಮುರ್ಮು ಅವರು ಒಟ್ಟು 7 ಜನರಿಗೆ ಕೀರ್ತಿ ಚಕ್ರ, 15 ಜನರಿಗೆ ವೀರ ಚಕ್ರ ಹಾಗೂ 29 ಜನರಿಗೆ ಶೌರ್ಯ ಚಕ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.

Edited By : Abhishek Kamoji
PublicNext

PublicNext

09/06/2026 05:59 pm

Cinque Terre

23.14 K

Cinque Terre

2