ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಸ್ಸಾಂನ 'ತೇಜ್‌ಪುರ ಲಿಚಿ'ಗೆ ಜಾಗತಿಕ ಮನ್ನಣೆ - ದುಬೈ ಮತ್ತು ಸಿಂಗಾಪುರಕ್ಕೆ ಮೊದಲ ರಫ್ತು!

ತೇಜ್‌ಪುರ (ಅಸ್ಸಾಂ): ಅಸ್ಸಾಂನ ಕೃಷಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಅಸ್ಸಾಂನ ವಿಶೇಷ 'ಜಿಯೋಗ್ರಾಫಿಕಲ್ ಇಂಡಿಕೇಶನ್' (GI) ಟ್ಯಾಗ್ ಹೊಂದಿರುವ ವಿಶ್ವವಿಖ್ಯಾತ ತೇಜ್‌ಪುರ ಲಿಚಿ, ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಾಲಿಟ್ಟಿದೆ.

ಭಾರತದ ಈ ರುಚಿಕರ ಹಣ್ಣು ಮೊದಲ ಬಾರಿಗೆ ವಿದೇಶಗಳಿಗೆ ರಫ್ತಾಗಿದ್ದು, ದುಬೈ ಮತ್ತು ಸಿಂಗಾಪುರದ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ವಿಷಯವನ್ನು ಹಂಚಿಕೊಂಡಿದ್ದು, ಇದು ಈಶಾನ್ಯ ಭಾರತದ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ದುಬೈಗೆ ರಫ್ತು: ಜೂನ್ 7, 2026 ರಂದು 1 ಮೆಟ್ರಿಕ್ ಟನ್ ಲಿಚಿ ರವಾನೆಯಾಗಿದೆ.

ಸಿಂಗಾಪುರಕ್ಕೆ ರಫ್ತು: ಜೂನ್ 9, 2026 ರಂದು 600 ಕೆಜಿ ಲಿಚಿ ರಫ್ತು ಮಾಡಲಾಗಿದೆ.

ಈ ಮಹತ್ವದ ರಫ್ತು ಪ್ರಕ್ರಿಯೆಯನ್ನು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA), ಅಸ್ಸಾಂ ಸರ್ಕಾರ ಮತ್ತು ಸ್ಥಳೀಯ ರೈತ ಗುಂಪುಗಳ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ.

ತೇಜ್‌ಪುರದ ಸೋನಿತ್‌ಪುರ ಜಿಲ್ಲೆಯಲ್ಲಿ ಬೆಳೆಯುವ ಈ ಲಿಚಿ ತನ್ನ ವಿಶಿಷ್ಟ ಗುಣಮಟ್ಟಕ್ಕೆ ಹೆಸರುವಾಸಿ. ಗಾಢ ಕೆಂಪು ಬಣ್ಣ ಮತ್ತು ತಾಜಾತನ. ಅಧಿಕ ಸಿಹಿ ಮತ್ತು ರಸಭರಿತ ತಿರುಳು ಹೊಂದಿದೆ. ಅತ್ಯಂತ ಚಿಕ್ಕ ಬೀಜಗಳನ್ನು ಹೊಂದಿರುವ ಈ ಹಣ್ಣು, 2015 ರಲ್ಲಿಯೇ GI ಟ್ಯಾಗ್ ಪಡೆದಿದೆ.

ತೇಜ್‌ಪುರದಲ್ಲಿ ಲಿಚಿ ಕೃಷಿಯು 1923 ರಲ್ಲಿ ಪದ್ಮನಾಥ್ ಗೋಹೈನ್ ಬರುವಾ ಅವರ ಅವಧಿಯಿಂದಲೇ ಆರಂಭವಾಯಿತು. ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಈ ತೋಟಗಾರಿಕಾ ಬೆಳೆ, ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ.

ತೇಜ್‌ಪುರದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ 'ಲಿಚಿ ಉತ್ಸವ'ದ ಸಂದರ್ಭದಲ್ಲೇ ಈ ರಫ್ತು ಪ್ರಕ್ರಿಯೆ ನಡೆದಿದ್ದು, ಸ್ಥಳೀಯ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಮೂಲಕ ರೈತರ ಆದಾಯ ಹೆಚ್ಚಳವಾಗಲಿದ್ದು, ಅಸ್ಸಾಂನ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ.

Edited By : Nagaraj Tulugeri
PublicNext

PublicNext

10/06/2026 04:46 pm

Cinque Terre

8.39 K

Cinque Terre

0