ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ : ಕೋರ್ಟ್ ಹಿಂಭಾಗ ರಸ್ತೆಯಲ್ಲಿ ಕಸದ ರಾಶಿ ಕರವೇಯಿಂದ ಹೋರಾಟದ ಎಚ್ಚರಿಕೆ !

ಸಕಲೇಶಪುರ : ಪಟ್ಟಣದ ಚಂಪಕನಗರ ಜನತಾ ಕ್ವಾಟ್ರರ್ಸ್ ಹಾಗೂ ಕೋರ್ಟ್ ಹಿಂಭಾಗದ ರಸ್ತೆಯ ಬದಿಯಲ್ಲಿ ದಿನೇದಿನೇ ಹೆಚ್ಚುತ್ತಿರುವ ಕಸದ ರಾಶಿಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಆರೋಪಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತ ಆಹಾರ ಪದಾರ್ಥಗಳು ಹಾಗೂ ಗೃಹಬಳಕೆಯ ಕಸವನ್ನು ರಸ್ತೆ ಬದಿಯಲ್ಲೇ ರಾಶಿ ಹಾಕಲಾಗಿರುವುದರಿಂದ ದುರ್ವಾಸನೆ ವ್ಯಾಪಿಸಿದ್ದು, ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆ, ನೊಣಗಳ ಉತ್ಪತ್ತಿ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಕರವೇ ಮುಖಂಡರು ಆತಂಕ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕರವೇ ಕಾರ್ಯಕರ್ತರು, ಕಸದ ರಾಶಿಯನ್ನು ಕೂಡಲೇ ತೆರವುಗೊಳಿಸಿ, ನಿಯಮಿತ ಸ್ವಚ್ಛತಾ ಕಾರ್ಯ ಹಾಗೂ ಔಷಧ ಸಿಂಪಡಣೆ ನಡೆಸುವಂತೆ ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಕಾರ್ಯದರ್ಶಿ ಜೈಕುಮಾರ್, "ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕಸ ತೆರವುಗೊಳಿಸಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕರವೇ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

ರೈತ ಘಟಕದ ಅಧ್ಯಕ್ಷ ವಸಂತ್ ಬೊಮ್ಮನಕೆರೆ ಮಾತನಾಡಿ, "ಸ್ವಚ್ಛತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಆದರೆ ಜನರು ಬಳಸುವ ರಸ್ತೆ ಬದಿಯಲ್ಲಿ ಕಸದ ರಾಶಿ ಸಂಗ್ರಹವಾಗಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ತಕ್ಷಣ ಶಾಶ್ವತ ಪರಿಹಾರ ಕಂಡುಕೊಂಡು, ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ಹೋರಾಟ ತೀವ್ರಗೊಳಿಸಲಾಗುವುದು" ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ಸುನಿಲ್ ಹಾಡ್ಲಹಳ್ಳಿ, ನಗರ ಘಟಕದ ಅಧ್ಯಕ್ಷ ಪ್ರಜ್ವಲ್, ಕಸಬಾ ಹೋಬಳಿ ಅಧ್ಯಕ್ಷ ಸಿದ್ದಾರ್ಥ್ ಪಟೇಲ್, ಯುವ ಘಟಕದ ಅಧ್ಯಕ್ಷ ಮಧು ಬೊಮ್ಮನಕೆರೆ, ಕಾರ್ಯಕರ್ತರಾದ ಅನಂತ್, ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : Vinayak Patil
Kshetra Samachara

Kshetra Samachara

10/06/2026 07:18 pm

Cinque Terre

900

Cinque Terre

0

ಸಂಬಂಧಿತ ಸುದ್ದಿ