ಸಕಲೇಶಪುರ: ಹಾಸನ, ಕೊಡಗು, ಚಿಕ್ಕಮಗಳೂರು ಹಾಗೂ ಸಕಲೇಶಪುರ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ರೈತರು ಹಾಗೂ ಗ್ರಾಮೀಣ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ರಕ್ಷಣಾ ಸೇನೆ ಹಾಸನ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಹೊಸಕೊಪ್ಪಲು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಡಿನೊಳಗಿನ ಸಾಂಪ್ರದಾಯಿಕ ಮಾರ್ಗಗಳು ಮುಚ್ಚಿಹೋಗಿರುವುದು, ಅರಣ್ಯ ಪ್ರದೇಶಗಳಲ್ಲಿ ಆನೆಗಳಿಗೆ ಆಹಾರ ಮತ್ತು ನೀರಿನ ಕೊರತೆ ಉಂಟಾಗಿರುವುದು ಕಾಡಾನೆಗಳು ಗ್ರಾಮ ಹಾಗೂ ಕೃಷಿ ಪ್ರದೇಶಗಳಿಗೆ ಬರುವ ಪ್ರಮುಖ ಕಾರಣಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಅರಣ್ಯ ಪ್ರದೇಶಗಳಲ್ಲಿ ಬಿದಿರು, ಹುಲ್ಲು ಹಾಗೂ ನೀರಿನ ಮೂಲಗಳನ್ನು ಹೆಚ್ಚಿಸುವ ಮೂಲಕ ಆನೆಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾಡಾನೆಗಳ ನಿಯಂತ್ರಣಕ್ಕಾಗಿ ಗುಣಮಟ್ಟದ ಸೋಲಾರ್ ಫೆನ್ಸಿಂಗ್, ಆನೆ ನಿರೋಧಕ ಕಂದಕಗಳ ನಿರ್ಮಾಣ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ. ಕಾಡಾನೆಗಳಿಗೆ GPS ಕಾಲರ್ ಅಳವಡಿಸಿ ಅವುಗಳ ಚಲನವಲನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು.
ಗ್ರಾಮಸ್ಥರಿಗೆ ಮೊಬೈಲ್ ಸಂದೇಶ, ಸೈರನ್ ಹಾಗೂ ಇತರೆ ಮುನ್ನೆಚ್ಚರಿಕೆ ವ್ಯವಸ್ಥೆಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಸಹ ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ತೆರಳುವ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಹ ಹೆದರುವ ವಾತಾವರಣ ನಿರ್ಮಾಣವಾಗಿದೆ.
ಸಂಜೆ ವೇಳೆಯ ಬಳಿಕ ಗ್ರಾಮಸ್ಥರು ಮನೆಗಳಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನಿರಂತರವಾಗಿ ಜನವಸತಿ ಪ್ರದೇಶಗಳಿಗೆ ಬಂದು ತೊಂದರೆ ಉಂಟುಮಾಡುತ್ತಿರುವ ಕಾಡಾನೆಗಳನ್ನು ತಜ್ಞರ ಸಲಹೆಯ ಮೇರೆಗೆ ಸೂಕ್ತ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ನಾಗೇಂದ್ರ ಹೊಸಕೊಪ್ಪಲು ಆಗ್ರಹಿಸಿದರು.
ಕಾಡಾನೆ ದಾಳಿಯಿಂದ ಬೆಳೆ ನಷ್ಟ, ಮನೆಗಳ ಹಾನಿ ಹಾಗೂ ಮಾನವ ಜೀವಹಾನಿ ಸಂಭವಿಸಿದಾಗ ಮಾತ್ರ ಸಮಸ್ಯೆ ಬಗ್ಗೆ ಚರ್ಚೆ ನಡೆಯುವುದು ಸರಿಯಲ್ಲ. ಅನೇಕ ಸಂಘ-ಸಂಸ್ಥೆಗಳು ಹಾಗೂ ರೈತ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ದಿನದಿಂದ ದಿನಕ್ಕೆ ಆನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಸದರು, ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸ್ಥಳೀಯರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
"ಒಂದು ರಾತ್ರಿ 20 ರಿಂದ 30 ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿದರೆ ರೈತನ ವರ್ಷದ ಶ್ರಮವೇ ನಾಶವಾಗುತ್ತದೆ. ಬೆಳೆ ಉಳಿಸಿಕೊಳ್ಳುವುದೇ ರೈತನಿಗೆ ದೊಡ್ಡ ಸವಾಲಾಗಿದೆ. ಕಾಡು ಪ್ರಾಣಿಗಳ ಸಂರಕ್ಷಣೆಯ ಜೊತೆಗೆ ರೈತರ ಬದುಕು ಮತ್ತು ಸುರಕ್ಷತೆಯನ್ನೂ ಸರ್ಕಾರ ಸಮಾನವಾಗಿ ಪರಿಗಣಿಸಬೇಕು" ಎಂದು ನಾಗೇಂದ್ರ ಹೊಸಕೊಪ್ಪಲು ಅಭಿಪ್ರಾಯಪಟ್ಟರು.
ಕಾಡಾನೆ ಸಮಸ್ಯೆಯನ್ನು ಕೇವಲ ಅರಣ್ಯ ಇಲಾಖೆಯ ಸಮಸ್ಯೆಯೆಂದು ಪರಿಗಣಿಸದೇ, ಜನರ ಜೀವ, ಜೀವನೋಪಾಯ ಹಾಗೂ ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದ ವಿಷಯವೆಂದು ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
PublicNext
18/06/2026 04:41 pm