ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರದಲ್ಲಿ ಕಸದ ರಾಶಿಗೆ ಮುಕ್ತಿ: ಜನರ ಹೋರಾಟಕ್ಕೆ ಸಿಕ್ಕ ಜಯ!

ಸಕಲೇಶಪುರ: ಪಟ್ಟಣದ ಚಂಪಕನಗರ ಜನತಾ ಕ್ವಾಟ್ರರ್ಸ್ ಹಾಗೂ ಕೋರ್ಟ್ ಹಿಂಭಾಗದ ರಸ್ತೆಯ ಬದಿಯಲ್ಲಿ ದಿನೇದಿನೇ ಹೆಚ್ಚಾಗುತ್ತಿದ್ದ ಕಸದ ರಾಶಿಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಪ್ರತಿಭಟನೆ ಎಚ್ಚರಿಕೆ ನೀಡಿದ್ದಲ್ಲದೆ, ಮಾಧ್ಯಮಗಳಲ್ಲಿ ವರದಿಯಾಗಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡ ಬೆನ್ನಲ್ಲೇ ಪುರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ತಾಂತ್ರಿಕ ಶಾಖೆಯ ಸಹಾಯಕ ರೇವಣ್ಣ ಹಾಗೂ ಸೋಮಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ವರ್ಗವು ಸ್ಥಳಕ್ಕೆ ತೆರಳಿ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರೇವಣ್ಣ, "ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಪುರಸಭೆಯ ಕಸದ ವಾಹನವು ಪ್ರತಿದಿನ ಮನೆ ಬಾಗಿಲಿಗೆ ಬರುತ್ತಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು. ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು" ಎಂದು ಮನವಿ ಮಾಡಿದರು.

ಕಳೆದ ಕೆಲವು ದಿನಗಳಿಂದ ಕಸದ ರಾಶಿಯಿಂದ ದುರ್ವಾಸನೆ, ಸೊಳ್ಳೆ ಹಾಗೂ ನೊಣಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿತ್ತು. ಇದೀಗ ಸ್ವಚ್ಛತಾ ಕಾರ್ಯದಿಂದ ಪರಿಸರ ಮತ್ತೆ ಸ್ವಚ್ಛ ಹಾಗೂ ಸುಂದರ ರೂಪ ಪಡೆದುಕೊಂಡಿದೆ.

ಈ ನಡುವೆ ಸ್ಥಳೀಯ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಪುರಸಭೆಗೆ ಮತ್ತೊಂದು ಮಹತ್ವದ ಸಲಹೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮರುಕಳಿಸದಂತೆ ಕಸ ಎಸೆಯುವವರನ್ನು ಗುರುತಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ನಿಯಮ ಉಲ್ಲಂಘಿಸಿ ಕಸ ಸುರಿಯುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

"ಸ್ವಚ್ಛತೆ ಎನ್ನುವುದು ಕೇವಲ ಪುರಸಭೆಯ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯಕರ ಸಮಾಜ ನಿರ್ಮಾಣದ ಮೊದಲ ಹೆಜ್ಜೆಯಾಗಿದೆ" ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳ ಜವಾಬ್ದಾರಿಯುತ ವರದಿ, ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಪಾತ್ರ ಹಾಗೂ ಪುರಸಭೆಯ ತ್ವರಿತ ಕ್ರಮದಿಂದ ಕಸದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವ ನಿರೀಕ್ಷೆ ಸಾರ್ವಜನಿಕರಲ್ಲಿದೆ.

Edited By :
PublicNext

PublicNext

14/06/2026 02:42 pm

Cinque Terre

10.5 K

Cinque Terre

0

ಸಂಬಂಧಿತ ಸುದ್ದಿ