ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನವೀಯತೆ ಮೆರೆದ ಸಕಲೇಶಪುರ ಆಡಳಿತ: ಸಂತ್ರಸ್ತರ ಮನೆಬಾಗಿಲಲ್ಲೇ ಪರಿಹಾರ!

ಸಕಲೇಶಪುರ: ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಹಾಗೂ ಬಣವೆ ನಷ್ಟ ಪರಿಹಾರ ಯೋಜನೆಯಡಿ ಬಾಕಿ ಇದ್ದ ವಿವಿಧ ಪ್ರಕರಣಗಳ ಪರಿಶೀಲನೆ ಮತ್ತು ತ್ವರಿತ ನಿರ್ಣಯಕ್ಕಾಗಿ ಉಪವಿಭಾಗ ಮಟ್ಟದ ಸಮಿತಿಯ ಸಭೆಯನ್ನು ಸಂತ್ರಸ್ತರ ಮನೆಬಾಗಿಲಲ್ಲೇ ಆಯೋಜಿಸಿ ಮಾನವೀಯ ಸ್ಪರ್ಶದ ಆಡಳಿತಕ್ಕೆ ಸಾಕ್ಷಿಯಾಯಿತು.

ಯಸಳೂರು ಹೋಬಳಿಯ ಸಂತಹಳ್ಳಿ ಗ್ರಾಮದಲ್ಲಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರ ಆತ್ಮಹತ್ಯೆ ಹಾಗೂ ಆಕಸ್ಮಿಕ ಮರಣ ಪ್ರಕರಣಗಳನ್ನು ದಾಖಲಾತಿಗಳ ಸಮೇತ ಪರಿಶೀಲಿಸಿ ಸಮಾಲೋಚನೆ ನಡೆಸಲಾಯಿತು.ಸಭೆಯ ಆರಂಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಕುಮಾರ್ ಯು.ಎಂ. ಮಾತನಾಡಿ, ಸರ್ಕಾರ ಮತ್ತು ವಿವಿಧ ಇಲಾಖೆಗಳು ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ಸುಲಭವಾಗಿ ತಲುಪಿಸುವ ಉದ್ದೇಶದಿಂದ ದಾಖಲೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂತಹಳ್ಳಿ ಗ್ರಾಮದ ದಿವಾಕರ ಎಸ್.ಜಿ. ಹಾಗೂ ಗೊದ್ದು ಗ್ರಾಮದ ತಿಪ್ಪೇಗೌಡ ಬಿ.ಕೆ. ಅವರ ರೈತರ ಆತ್ಮಹತ್ಯೆ ಪ್ರಕರಣಗಳು, ಕರಗೂರು ಗ್ರಾಮದ ಕೆ.ಎನ್. ಪ್ರಕಾಶ್ ಹಾಗೂ ಚಿಗನಹಳ್ಳಿ ಗ್ರಾಮದ ನಂಜಯ್ಯ ಅವರ ಆಕಸ್ಮಿಕ ಮರಣ ಪ್ರಕರಣಗಳನ್ನು ಪರಿಶೀಲಿಸಲಾಯಿತು. ಸಂಬಂಧಿತ ಇಲಾಖೆಗಳ ದಾಖಲಾತಿಗಳು, ಸ್ಥಳ ಮಹಜರ್ ವರದಿಗಳು ಹಾಗೂ ಗ್ರಾಮಸ್ಥರ ಮಾಹಿತಿಯನ್ನು ಆಧರಿಸಿ ಸಮಗ್ರ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಸಂತ್ರಸ್ತ ಕುಟುಂಬಗಳ ಮನೆಬಾಗಿಲಿಗೆ ತೆರಳಿ ಸಮಾಲೋಚನೆ ನಡೆಸುವುದರಿಂದ ಆಡಳಿತ ಅವರೊಂದಿಗೆ ನಿಂತಿದೆ ಎಂಬ ಆತ್ಮಸ್ಥೈರ್ಯ ಮೂಡಿಸುವುದರ ಜೊತೆಗೆ ವಿವಿಧ ಇಲಾಖೆಗಳ ನೆರವು ಮತ್ತು ಸೌಲಭ್ಯಗಳ ಕುರಿತು ನೇರ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಹಶೀಲ್ದಾರ್ ಸೇರಿದಂತೆ ಸಮಿತಿಯ ಸದಸ್ಯರು ಸಂತ್ರಸ್ತ ಕುಟುಂಬಗಳ ಬಾಕಿ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಮಕ್ಕಳ ಶಿಕ್ಷಣ, ವಿದ್ಯಾರ್ಥಿವೇತನ, ವಸತಿ ಶಾಲೆಗಳಲ್ಲಿನ ಅವಕಾಶಗಳು ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿದರು.ಪ್ರಕರಣಗಳ ಸಮಗ್ರ ಪರಿಶೀಲನೆಯ ಬಳಿಕ ಎರಡು ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರಧನ ಮಂಜೂರಾತಿಗೆ ಶಿಫಾರಸು ಮಾಡಲಾಗಿದ್ದು, ಎರಡು ರೈತರ ಆಕಸ್ಮಿಕ ಮರಣ ಪ್ರಕರಣಗಳಿಗೆ ತಲಾ ₹2 ಲಕ್ಷ ಪರಿಹಾರಧನ ಶಿಫಾರಸು ಮಾಡಲಾಯಿತು.

ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾರ್ತಿಕ್, ಸಹಕಾರ ಇಲಾಖೆಯ ಮಾರಾಟಾಧಿಕಾರಿ ಮಂಜುನಾಥ್, ತಾಂತ್ರಿಕ ಅಧಿಕಾರಿ ಅಜಿತ್ ಪ್ರಸಾದ್, ಕೃಷಿ ಅಧಿಕಾರಿ ಕೇಶವಮೂರ್ತಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.ಸಭೆಯ ಅಂತ್ಯದಲ್ಲಿ ಸಂತ್ರಸ್ತ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಅಧಿಕಾರಿಗಳ ಮಾನವೀಯ ಕಾರ್ಯವೈಖರಿಗೆ ಕೃತಜ್ಞತೆ ಸಲ್ಲಿಸಿದರು.

Edited By :
Kshetra Samachara

Kshetra Samachara

06/06/2026 10:13 pm

Cinque Terre

680

Cinque Terre

0

ಸಂಬಂಧಿತ ಸುದ್ದಿ