ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯ ಕರ್ನಾಟಕಕ್ಕೆ ರೈಲ್ವೆ ಕ್ರಾಂತಿ: 2028ಕ್ಕೆ ತುಮಕೂರು-ದಾವಣಗೆರೆ ನೇರ ರೈಲು..ಸಚಿವ ವಿ. ಸೋಮಣ್ಣ

ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ಭಾಗಗಳಲ್ಲಿನ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವು 2028ರ ಫೆಬ್ರವರಿಯೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಮಂಗಳವಾರ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಸಮೀಕ್ಷಾ ಸಭೆ ನಡೆಸಿದ ಸಚಿವರು, ರಸ್ತೆ ಮೇಲ್ಸೇತುವೆಗಳು (ROB), ರಸ್ತೆ ಕೆಳಸೇತುವೆಗಳು (RUB) ಮತ್ತು ಪಾದಚಾರಿ ಮೇಲ್ಸೇತುವೆಗಳು (FOB) ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಕರ್ನಾಟಕದ ಬಹುನಿರೀಕ್ಷಿತ ಹೊಸ ರೈಲು ಯೋಜನೆಯಾದ 191 ಕಿ.ಮೀ. ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವನ್ನು ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆಯ 50:50 ವೆಚ್ಚ ಹಂಚಿಕೆ ಮಾದರಿಯಡಿಯಲ್ಲಿ ಒಟ್ಟು 1,801 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯು ಮಧ್ಯ ಕರ್ನಾಟಕದ ಸಂಪರ್ಕ ವ್ಯವಸ್ಥೆಗೆ ಹೊಸ ಕ್ರಾಂತಿಯನ್ನು ತರಲಿದೆ. ಯೋಜನೆಗೆ ಅಗತ್ಯವಿರುವ ಭೂಮಿಯ ಶೇ.92ಕ್ಕಿಂತ ಹೆಚ್ಚು ಭಾಗವನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಉರುಕೆರೆ–ತಿಮ್ಮರಾಜನಹಳ್ಳಿ (13.31 ಕಿ.ಮೀ.) ವಿಭಾಗವು ಪೂರ್ಣಗೊಂಡಿದ್ದು, ಕಾರ್ಯಾಚರಣೆಗೆ ಸಿದ್ಧವಾಗಿದೆ. ಸಂಪೂರ್ಣ ಯೋಜನೆಯನ್ನು ಫೆಬ್ರವರಿ 2028ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಸಚಿವರ ಸ್ವಕ್ಷೇತ್ರವಾದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 32 ರಸ್ತೆ ಮೇಲ್ಸೇತುವೆ (ROB) ಮತ್ತು ರಸ್ತೆ ಕೆಳಸೇತುವೆ (RUB) ಕಾಮಗಾರಿಗಳು ಪ್ರಗತಿಯಲ್ಲಿವೆ. ಪಂಡಿತನಹಳ್ಳಿ, ಮೈದಾಳ, ಬಡ್ಡಿಹಳ್ಳಿ, ಬಟವಾಡಿ, ಹೆಗ್ಗೆರೆ, ಮಲ್ಲಸಂದ್ರ, ಬೆಂಚೆಗೆರೆ, ನಿಟ್ಟೂರು-ಮೈಸೂರು ಮಾರ್ಗ, ನಂದಿಹಳ್ಳಿ ಗೇಟ್ ಹಾಗೂ ಹಾಸನ ಮತ್ತು ಬಿದಿರೆಗುಡಿ ಕಡೆಗೆ ಬಿಎಚ್ ರಸ್ತೆಯಲ್ಲಿನ ಸೇತುವೆಗಳು ಇದರಲ್ಲಿ ಪ್ರಮುಖವಾಗಿವೆ. ಈ ಎಲ್ಲಾ ಕಾಮಗಾರಿಗಳನ್ನು 2026–27ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಬೆಸೆಯುವ ಅತ್ಯಂತ ಮಹತ್ವಾಕಾಂಕ್ಷೆಯ 206 ಕಿ.ಮೀ. ಉದ್ದದ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಪ್ರಗತಿಯನ್ನು ಸಭೆಯಲ್ಲಿ ಮುನ್ನೆಲೆಗೆ ತರಲಾಯಿತು. ಈ ಬೃಹತ್ ಯೋಜನೆಗೆ ಒಟ್ಟು 2,496 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದೆ. ಯೋಜನೆಯ ಒಟ್ಟು ಉದ್ದದ ಪೈಕಿ ಈಗಾಗಲೇ 83 ಕಿ.ಮೀ. ರೈಲು ಮಾರ್ಗ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಪ್ರಸ್ತುತ ಪ್ರಗತಿಯಲ್ಲಿರುವ ತುಮಕೂರು-ಉರುಕೆರೆ ವಿಭಾಗವು ಶಾಸನಬದ್ಧ ಸುರಕ್ಷತಾ ತಪಾಸಣೆಯಲ್ಲಿ ಉತ್ತೀರ್ಣಗೊಂಡಿದ್ದು, ಪಾವಗಡ-ದೊಡ್ಡಹಳ್ಳಿ ವಿಭಾಗವು ಉದ್ಘಾಟನೆಗೆ ಸಂಪೂರ್ಣ ಸಜ್ಜಾಗಿದೆ. ಇನ್ನುಳಿದ ಮಾರ್ಗಗಳ ಕಾಮಗಾರಿಗಳು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದ್ದು, ಶೇ. 97 ಕ್ಕೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಉಳಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು, ರಸ್ತೆ ಮುಚ್ಚುವಿಕೆ ಮತ್ತು ತಿರುವುಗಳಿಗೆ ಸಮಯೋಚಿತ ಅನುಮೋದನೆ ಪಡೆಯಲು ಹಾಗೂ ವಿದ್ಯುತ್ ಮಾರ್ಗಗಳು, ನೀರಿನ ಪೈಪ್‌ಲೈನ್‌ಗಳು ಮತ್ತು ಅರಣ್ಯ ಅನುಮತಿಗಳಂತಹ ಉಪಯುಕ್ತತೆ ಸ್ಥಳಾಂತರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಅತ್ಯವಶ್ಯಕ ಎಂದು ಸಚಿವ ಸೋಮಣ್ಣ ಹೇಳಿದರು. ಈ ಸಭೆಯಲ್ಲಿ ನೈಋತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nirmala Aralikatti
PublicNext

PublicNext

11/06/2026 11:52 am

Cinque Terre

3.99 K

Cinque Terre

0

ಸಂಬಂಧಿತ ಸುದ್ದಿ