ನವದೆಹಲಿ: ರಾಜ್ಯಸಭಾ ಚುನಾವಣೆಯ ನಾಮಪತ್ರ ತಿರಸ್ಕೃತಗೊಂಡಿರುವ ವಿಚಾರವಾಗಿ ಕಾಂಗ್ರೆಸ್‌ನ ಹಿರಿಯ ನಾಯಕಿ ಮೀನಾಕ್ಷಿ ನಟರಾಜನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅವರ ಅರ್ಜಿ ಇಂದು ತುರ್ತು ವಿಚಾರಣೆಗೆ ಬರುವ ಸಾಧ್ಯತೆಯಿದ್ದು, ನಾಮಪತ್ರ ಮರುಸ್ಥಾಪನೆಯಾಗುವ ಭರವಸೆ ಮೂಡಿದೆ.
ತೆಲಂಗಾಣದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿವರಗಳನ್ನು ನಾಮಪತ್ರದಲ್ಲಿ ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ಚುನಾವಣಾ ಅಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ಅವರ ನಾಮಪತ್ರ ತಿರಸ್ಕರಿಸಿದ್ದರು.
ಇನ್ನು ಪ್ರಕರಣವೇ ದಾಖಲಾಗಿಲ್ಲ: ಖಾಸಗಿ ದೂರಿನ ಮೇರೆಗೆ ನ್ಯಾಯಾಲಯ ಯಾವುದೇ ಕಾಗ್ನಿಜನ್ಸ್ (ಸ್ವೀಕೃತಿ) ತೆಗೆದುಕೊಂಡಿಲ್ಲ. ಕೇವಲ ಪ್ರಾಥಮಿಕ ನೋಟಿಸ್ ನೀಡಲಾಗಿದೆ. ಕಾಗ್ನಿಜನ್ಸ್ ತೆಗೆದುಕೊಳ್ಳದ ಹೊರತು ಅದು ಕ್ರಿಮಿನಲ್ ಪ್ರಕರಣವಾಗುವುದಿಲ್ಲ ಎಂಬುದು ಕಾಂಗ್ರೆಸ್ ವಾದವಾಗಿದೆ.
ನಿಯಮಗಳ ಉಲ್ಲಂಘನೆಯಾಗಿಲ್ಲ: ಜನತಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ, ನ್ಯಾಯಾಲಯದಿಂದ ಅಧಿಕೃತವಾಗಿ ‘ಆರೋಪ ಹೊರಿಸಲ್ಪಟ್ಟಿದ್ದರೆ’ ಮಾತ್ರ ಅದನ್ನು ನಾಮಪತ್ರದಲ್ಲಿ ಬಹಿರಂಗಪಡಿಸುವುದು ಕಡ್ಡಾಯ. ಮೀನಾಕ್ಷಿ ಅವರ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ. ನೂತನ ನಿಯಮದ ಪ್ರಕಾರ, ಖಾಸಗಿ ದೂರು ಬಂದಾಗ ಆರೋಪಿಯ ವಾದ ಆಲಿಸದೆ ನ್ಯಾಯಾಲಯ ನೇರ ವಿಚಾರಣೆ ನಡೆಸುವಂತಿಲ್ಲ. ಇದು ರಾಜಕೀಯ ಪ್ರೇರಿತ ದೂರುಗಳಿಂದ ರಕ್ಷಣೆ ನೀಡುತ್ತದೆ.
ಈ ಹಿಂದೆ ಇಂತಹ ತಾಂತ್ರಿಕ ಕಾರಣಗಳಿಗಾಗಿ ನಾಮಪತ್ರ ತಿರಸ್ಕೃತಗೊಂಡಾಗ ಸುಪ್ರೀಂ ಕೋರ್ಟ್ ಅಭ್ಯರ್ಥಿಗಳ ಪರ ತೀರ್ಪು ನೀಡಿದ ಉದಾಹರಣೆಗಳಿವೆ. ಹೀಗಾಗಿ, ಸುಪ್ರೀಂ ಕೋರ್ಟ್‌ನಿಂದ ತಡೆ ಸಿಕ್ಕರೆ ಮೀನಾಕ್ಷಿ ನಟರಾಜನ್ ಅವರು ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣಾ ಕಣಕ್ಕೆ ಯಶಸ್ವಿಯಾಗಿ ಮರಳಲಿದ್ದಾರೆ.
PublicNext
11/06/2026 01:03 pm