ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಅನ್ಯಾಯ : ಎಕ್ಸ್​​ ಪೋಸ್ಟ್​ ಮೂಲಕ 'ವಂಚಕ ಕಾಂಗ್ರೆಸ್' ಎಂದು ಜೆಡಿಎಸ್ ವಾಗ್ದಾಳಿ!

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯಲು ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಕೆಲವು ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಕಳೆದ ಐದು ತಿಂಗಳುಗಳಿಂದಲೂ ಹಣ ಸಂದಾಯವಾಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಗೃಹಲಕ್ಷ್ಮಿ ಯೋಜನೆಯ ನಿಯಮಗಳನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಪ್ರಸ್ತುತ ರಾಜ್ಯದಲ್ಲಿರುವ 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಸುಮಾರು 1.48 ಲಕ್ಷ ಮಂದಿ ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಈ ಬದಲಾವಣೆಗೆ ಮುಖ್ಯ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ನ ಗ್ಯಾರಂಟಿಗಳ 'ಅಸಲಿ ಬಣ್ಣ' ಬಯಲಾಗಿದೆ ಎಂದು ಆರೋಪಿಸಿದೆ. ಚುನಾವಣೆಗೆ ಮುನ್ನ ಯೋಜನೆಗೆ ಯಾವುದೇ ಷರತ್ತುಗಳಿಲ್ಲ ಎಂದು ಭರವಸೆ ನೀಡಿದ್ದ ಕಾಂಗ್ರೆಸ್, ಇದೀಗ 17 ಜಿಲ್ಲೆಗಳಲ್ಲಿ ಬರೋಬ್ಬರಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಟ್ಟು ತನ್ನ 'ನೈಜ ಮುಖ'ವನ್ನು ಬಹಿರಂಗಪಡಿಸಿದೆ ಎಂದು ಜೆಡಿಎಸ್ ದೂರಿದೆ.

ಬಯೋಮೆಟ್ರಿಕ್, ಸರ್ವರ್ ಸಮಸ್ಯೆಗಳಂತಹ ನೆಪಗಳನ್ನು ಹೇಳಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ 'ಕೈ' ಸರ್ಕಾರದ ದ್ರೋಹವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಎಂದರೆ, ಗೃಹಲಕ್ಷ್ಮಿ ಫಲಾನುಭವಿಗಳ ಕಡಿತದ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿದರೆ, 'ನನಗೆ ಗೊತ್ತಿಲ್ಲ' ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಹಾಗಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಯಾರು? ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೆ ಇಲಾಖೆಗಳಲ್ಲಿ ಇಷ್ಟೆಲ್ಲಾ ನಡೆಯುತ್ತಿದೆಯೇ ಅಥವಾ ಗೊತ್ತಿದ್ದೂ ನಾಟಕವಾಡುತ್ತಿದ್ದಾರೆಯೇ ಎಂದು ಜೆಡಿಎಸ್ ಪ್ರಶ್ನಿಸಿದೆ.

5,000 ಕೋಟಿ ರೂಪಾಯಿ ಗೃಹಲಕ್ಷ್ಮಿ ಹಣವನ್ನು 'ತಿಂದು ತೇಗಿರುವ' ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮತಗಳಿಗಾಗಿ ಮಹಿಳೆಯರನ್ನು ಯಾಮಾರಿಸಿ ಅಧಿಕಾರ ಸಿಕ್ಕ ಮೇಲೆ ಅವರನ್ನು ಅನರ್ಹರು ಎಂದು ಬೀದಿಗೆ ತಳ್ಳುವುದು ಯಾವ ರೀತಿಯ ಮಹಿಳಾ ಸಬಲೀಕರಣ? ಇದು ಕೇವಲ ವೋಟ್ ಬ್ಯಾಂಕ್‌ಗಾಗಿ ಮಾಡಿದ ವಂಚನೆಯಾಗಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದ ತಾಯಂದಿರ ಕ್ಷಮೆ ಕೇಳಬೇಕು. ಕೊಟ್ಟ ಮಾತಿಗೆ ತಪ್ಪಿದವರನ್ನು ಈ ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.

Edited By :
PublicNext

PublicNext

11/06/2026 01:30 pm

Cinque Terre

5.61 K

Cinque Terre

0

ಸಂಬಂಧಿತ ಸುದ್ದಿ