ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನ್‌ರೇಗಾ) ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ವೇತನ ಹಂಚಿಕೆ ಅನುಪಾತವನ್ನು ಕನಿಷ್ಠ 80:20ಕ್ಕೆ ಹೆಚ್ಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 1ರಿಂದ ಜಾರಿಗೆ ಬರಲಿರುವ ಕೇಂದ್ರದ 60:40ರ ಹೊಸ ಅನುಪಾತವು ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರಲಿದ್ದು, ಇದನ್ನು ತಕ್ಷಣವೇ ಪರಿಷ್ಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಯುಪಿಎ ಸರ್ಕಾರ 2006ರಲ್ಲಿ ಜಾರಿಗೊಳಿಸಿದ್ದ ಮನರೇಗಾ ಯೋಜನೆಯಲ್ಲಿ ಕೂಲಿ ವೆಚ್ಚದ ಶೇ.90ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಭರಿಸುತ್ತಿತ್ತು. ರಾಜ್ಯ ಸರ್ಕಾರಗಳು ಕೇವಲ ಶೇ.10ರಷ್ಟು ವೆಚ್ಚವನ್ನು ಹೊತ್ತುಕೊಳ್ಳುತ್ತಿದ್ದವು ಎಂಬುದನ್ನು ಅವರು ಸ್ಮರಿಸಿದರು.
ಹಾಗಾಗಿ, ಹಿಂದಿನ 90:10 ಅನುಪಾತವನ್ನು ಮುಂದುವರಿಸಬೇಕು ಅಥವಾ ಕನಿಷ್ಠ 80:20 ಅನುಪಾತವನ್ನಾದರೂ ಜಾರಿಗೆ ತರಬೇಕು ಎಂದು ಸಚಿವರು ಆಗ್ರಹಿಸಿದರು. ಇದರ ಜೊತೆಗೆ, ವರ್ಷದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡದಿರುವ ಕೇಂದ್ರದ ಪ್ರಸ್ತಾಪವೂ ಸಮರ್ಥನೀಯವಲ್ಲ ಎಂದರು. ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಿರುವ ಕಾರಣ ಗ್ರಾಮೀಣ ಭೂರಹಿತ ಕಾರ್ಮಿಕರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಬಿಡುವು ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಜೂನ್ 28 ಮತ್ತು 29ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಖಂಡ್ರೆ ತಿಳಿಸಿದರು. ಹೊಸ ಯೋಜನೆಯಡಿ ರಾಜ್ಯಗಳು ಯಾವ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂಬುದರ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಬಾರದು. ಉದ್ಯೋಗ ಆಯ್ಕೆ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಅವರು ಪ್ರತಿಪಾದಿಸಿದರು. ಇತ್ತೀಚೆಗೆ ಕೇಂದ್ರ ಸಚಿವರೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ರಾಜ್ಯ ಸರ್ಕಾರ ಕನಿಷ್ಠ ವೇತನ ಹೆಚ್ಚಳದ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಅದರಂತೆ ಯೋಜನೆಯ ವೇತನವನ್ನೂ ಪರಿಷ್ಕರಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ವೇತನ ಆಯೋಗ ರಚಿಸಲಾಗಿದ್ದು, ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಖಂಡ್ರೆ ಮಾಹಿತಿ ನೀಡಿದರು.
PublicNext
11/06/2026 02:43 pm