ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ವದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭಾಗವಹಿಸಿದ್ದಾರೆ. ರಾಜ್ಯಗಳ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು. ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೇರಿದಂತೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಈ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಆಡಳಿತ ಮಂಡಳಿಯ ಚರ್ಚೆಗಳು ಪ್ರಮುಖವಾಗಿ ಆಡಳಿತ ವ್ಯವಸ್ಥೆ, ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ (DPI), ಸಮನ್ವಯ, ಪಾಲುದಾರಿಕೆಗಳು ಮತ್ತು ದತ್ತಾಂಶ ಆಧಾರಿತ ವ್ಯವಸ್ಥೆಗಳಂತಹ ಅಂಶಗಳನ್ನು ಬಳಸಿಕೊಂಡು ಅನುಷ್ಠಾನ ಮಾರ್ಗಸೂಚಿಯನ್ನು ರೂಪಿಸುವುದರ ಮೇಲೆ ಕೇಂದ್ರೀಕರಿಸಲಿವೆ. ಇದರ ಜೊತೆಗೆ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ರಚನಾತ್ಮಕ ವ್ಯವಸ್ಥೆಯನ್ನು ರೂಪಿಸುವ ಮೂಲಕ ಜವಾಬ್ದಾರಿತನ ಮತ್ತು ಅಳೆಯಬಹುದಾದ ಪರಿಣಾಮವನ್ನು ಖಚಿತಪಡಿಸಿಕೊಳ್ಳುವುದಕ್ಕೂ ಒತ್ತು ನೀಡಲಾಗುವುದು.
ಸಭೆ ಮುಗಿದ ಬಳಿಕ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ. ಈ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, “ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದರು. ಜೊತೆಗೆ, ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ನಾಳೆ ಪ್ರಧಾನಿಯವರ ಭೇಟಿಗೆ ಸಮಯ ನಿಗದಿಯಾಗಿದ್ದು, ರಾಜ್ಯದ ಪ್ರಮುಖ ನೀರಾವರಿ ಹಾಗೂ ಆರ್ಥಿಕ ಯೋಜನೆಗಳ ಕುರಿತು ಅವರೊಂದಿಗೆ ಚರ್ಚಿಸಲಾಗುವುದು” ಎಂದು ತಿಳಿಸಿದರು.
PublicNext
11/06/2026 03:14 pm