ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮುಳುಗುತ್ತಿರುವ ಹಡಗಿನಂತಾದ ಟಿಎಂಸಿ - ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕಲ್ಯಾಣ್ ಬ್ಯಾನರ್ಜಿ ಬಂಡಾಯ!

ಕೋಲ್ಕತ್ತಾ: ಕಳೆದ ತಿಂಗಳು ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹೀನಾಯವಾಗಿ ಸೋತ ಬೆನ್ನಲ್ಲೇ, ಪಕ್ಷದ ನಾಯಕರು ಮುಳುಗುತ್ತಿರುವ ಹಡಗಿನಿಂದ ಜಿಗಿಯುವಂತೆ ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ. ಈ ಭಾರಿ ಬಿಕ್ಕಟ್ಟಿನ ನಡುವೆಯೇ, ಮಮತಾ ಬ್ಯಾನರ್ಜಿ ಅವರ ಪರಮಾಪ್ತ ಹಾಗೂ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮುಖ್ಯಸ್ಥೆ ‘ದೀದಿ’ಗೆ ಕಡಕ್ ಎಚ್ಚರಿಕೆ ನೀಡುವ ಮೂಲಕ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್ ಕೊಟ್ಟಿದ್ದಾರೆ.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಅಭಿಷೇಕ್‌ನ ಅಹಂಕಾರಿ ವರ್ತನೆ ನನಗೆ ಇಷ್ಟವಿಲ್ಲ. ದೀದಿ, ನನ್ನ ಹಾಗೂ ಆತನ ನಡುವೆ ನೀವೇ ಒಬ್ಬರನ್ನು ಆರಿಸಿಕೊಳ್ಳಿ" ಎಂದು ನೇರ ಸವಾಲು ಹಾಕಿದ್ದಾರೆ.

ಕಲ್ಯಾಣ್ ಬ್ಯಾನರ್ಜಿ ಅವರ ಆಕ್ರೋಶಕ್ಕೆ ಪ್ರಮುಖ ಕಾರಣ, ಅಭಿಷೇಕ್ ಬ್ಯಾನರ್ಜಿಗೆ ಸಂಬಂಧಿಸಿದ ಕಾನೂನು ಪ್ರಕರಣವೊಂದರಲ್ಲಿ ಕೊನೆ ಕ್ಷಣದಲ್ಲಿ ಇವರನ್ನು ಬದಲಾಯಿಸಿ ಬೇರೆ ವಕೀಲರನ್ನು ನೇಮಿಸಿದ್ದು. ಇದರಿಂದ ತೀವ್ರ ಅವಮಾನಕ್ಕೊಳಗಾಗಿರುವ ಕಲ್ಯಾಣ್ ಬ್ಯಾನರ್ಜಿ, "ನಾನು ಈ ವಕೀಲಿ ವೃತ್ತಿಯಲ್ಲಿ 45 ವರ್ಷ ಕಳೆದಿದ್ದೇನೆ. ಈಗಿನ ನಾಯಕರೆಲ್ಲಾ ನನ್ನ ಕೆಳಗೆ ಜೂನಿಯರ್ ಆಗಿ ಕೆಲಸ ಮಾಡಿದವರು. ರಾಜಕೀಯದಲ್ಲೂ ನಾನು ಅವನಿಗಿಂತ (ಅಭಿಷೇಕ್) ಸೀನಿಯರ್. ನನ್ನನ್ನು ಹೀಗೆ ಅವಮಾನಿಸಲು ಅವನಿಗೆ ಎಷ್ಟು ಧೈರ್ಯ? ಅವನ ಅಹಂಕಾರದ ನಿರ್ಧಾರಗಳಿಂದಲೇ ಇಂದು ಪಕ್ಷ ಇಂತಹ ದುಸ್ಥಿತಿಗೆ ತಲುಪಿದೆ ಮತ್ತು ಚುನಾವಣೆಯಲ್ಲಿ ನಾವು ಸೋಲಬೇಕಾಯಿತು" ಎಂದು ಗುಡುಗಿದ್ದಾರೆ.

"ನಾನು ಅವಮಾನ ಸಹಿಸುವುದಿಲ್ಲ. ದೀದಿಗೆ ನಾನು ವಿನಂತಿಸುವುದಿಷ್ಟೇ — ನೀವು ಅಭಿಷೇಕ್ ಬ್ಯಾನರ್ಜಿ ಮೇಲೆಯೇ ಅವಲಂಬಿತರಾಗುವುದಾದರೆ ಅವರೊಂದಿಗೇ ಇರಿ, ನನ್ನನ್ನು ಬಿಟ್ಟುಬಿಡಿ. ಒಂದು ವೇಳೆ ನೀವು ಅವನಿಂದ ದೂರ ಸರಿದರೆ ಮಾತ್ರ ನಾನು ನಿಮ್ಮ ಜೊತೆಗಿರುತ್ತೇನೆ."

ಕಳೆದ ತಿಂಗಳ ಚುನಾವಣಾ ಸೋಲಿನ ನಂತರ ಟಿಎಂಸಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಈಗಾಗಲೇ ಪಕ್ಷದಲ್ಲಿ ದೊಡ್ಡ ಮಟ್ಟದ ಬಂಡಾಯ ನಡೆದಿದ್ದು ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಿದೆ.

ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಶಾಸಕರು ಮಮತಾ ವಿರುದ್ಧ ತಿರುಗಿ ಬಿದ್ದು, ತಾವೇ "ನಿಜವಾದ ಟಿಎಂಸಿ" ಎಂದು ವಿಧಾನಸಭೆಯಲ್ಲಿ ಘೋಷಿಸಿಕೊಂಡಿದ್ದಾರೆ. ಸುಮಾರು 20 ಲೋಕಸಭಾ ಸಂಸದರು ಎನ್‌ಡಿಎ (NDA) ಒಕ್ಕೂಟಕ್ಕೆ ಬೆಂಬಲ ಸೂಚಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ನಾಲ್ಕು ರಾಜ್ಯಸಭಾ ಸಂಸದರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಮತಾ ಬ್ಯಾನರ್ಜಿ ಅವರ ಇಡೀ ಸಾಮ್ರಾಜ್ಯವೇ ಕಣ್ಮುಂದೆ ಕುಸಿಯುವ ಭೀತಿ ಎದುರಾಗಿದೆ.

ಒಟ್ಟಿನಲ್ಲಿ, ಚುನಾವಣಾ ಸೋಲಿನ ಬೆನ್ನಲ್ಲೇ ಸೋದರಳಿಯನ ಮೇಲಿನ ಕೋಪ ಹಾಗೂ ನಾಯಕರ ಸರಣಿ ರಾಜೀನಾಮೆಗಳು ಬಂಗಾಳದ ಹುಲಿ ಮಮತಾ ಬ್ಯಾನರ್ಜಿ ಅವರನ್ನು ಸಂಪೂರ್ಣವಾಗಿ ಕಟ್ಟಿಹಾಕಿವೆ.

Edited By : Nagaraj Tulugeri
PublicNext

PublicNext

11/06/2026 04:52 pm

Cinque Terre

5.5 K

Cinque Terre

0

ಸಂಬಂಧಿತ ಸುದ್ದಿ