ಚಂಡೀಗಢ : ದೇಶದ ಅತ್ಯಂತ ಸುಸಜ್ಜಿತ ನಗರಗಳಲ್ಲೊಂದಾದ ಚಂಡೀಗಢದಲ್ಲಿ ಮೈ ಜುಂ ಎನಿಸುವ ಭೀಕರ ಘಟನೆಯೊಂದು ನಡೆದಿದೆ. ಹಾಲು ತರಲು ಹೋಗಿದ್ದ ಎಂಟು ವರ್ಷದ ಪುಟ್ಟ ಬಾಲಕಿಯೊಬ್ಬಳು ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದಾಳೆ. ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದ ಈ ಕಂದಮ್ಮನ ಧಾರುಣ ಸಾವು ಇಡೀ ಪಂಜಾಬ್ ಮತ್ತು ಹರಿಯಾಣ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ.
ಹೌದು ಹಾಲಿನ ಪ್ಯಾಕೆಟ್ ತರಲು ಎಂಟು ವರ್ಷದ ಬಾಲಕಿಯೊಬ್ಬಳ ರೋಡಿನಲ್ಲಿ ನಡೆದು ಹೋಗುವಾಗ ಆಕೆಯ ಮೇಲೆ 4-5 ಹಸಿದ ಬೀದಿ ನಾಯಿಗಳ ಹಿಂಡು ಮುಗಿಬಿದ್ದು, ಅತ್ಯಂತ ಕ್ರೂರವಾಗಿ ಕಚ್ಚಿ ಕೊಂದಿವೆ.
ಸ್ಥಳೀಯ ಮೂಲಗಳ ಪ್ರಕಾರ, ಚಂಡೀಗಢದ ಹೊರವಲಯದ ಕೈಗಾರಿಕಾ ಪ್ರದೇಶದ ಬಳಿ ವಾಸಿಸುವ ವಲಸೆ ಕಾರ್ಮಿಕರೊಬ್ಬರ 8 ವರ್ಷದ ಹೆಣ್ಣು ಮಗಳು ಬೆಳಗ್ಗೆ ಮನೆಯ ಸಮೀಪದ ಅಂಗಡಿಗೆ ಹಾಲು ತರಲು ಹೊರಟಿದ್ದಳು. ಬಾಲಕಿ ನಿರ್ಜನ ರಸ್ತೆಯ ಮಧ್ಯೆ ಸಾಗುತ್ತಿದ್ದಾಗ, ಅಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಬೀದಿ ನಾಯಿಗಳ ಹಿಂಡು ಏಕಾಏಕಿ ಆಕೆಯ ಮೇಲೆರಗಿದೆ. ನಾಯಿಗಳ ಭೀಕರ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಆ ಪುಟ್ಟ ಕಂದಮ್ಮ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಚೀರಲಾರಂಭಿಸಿದ್ದಾಳೆ.
ಮಗುವಿನ ಆಕ್ರಂದನ ಕೇಳಿ ಓಡಿಬಂದ ಪೋಷಕರು ಮತ್ತು ಸ್ಥಳೀಯರು ನಾಯಿಗಳನ್ನು ಓಡಿಸುವಷ್ಟರಲ್ಲಿ ಇಡೀ ರಸ್ತೆ ರಕ್ತಮಯವಾಗಿತ್ತು. ದುಷ್ಟ ನಾಯಿಗಳು ಬಾಲಕಿಯ ಕೈ, ಕಾಲು, ಕುತ್ತಿಗೆ ಸೇರಿದಂತೆ ಇಡೀ ದೇಹದಾದ್ಯಂತ ಹಿಂಸಾತ್ಮಕವಾಗಿ ಕಚ್ಚಿ ಸೀಳಿದ್ದವು. ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅತಿಯಾದ ರಕ್ತಸ್ರಾವ ಹಾಗೂ ಆಘಾತದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.
ಈ ಘೋರ ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಗರ ಪಾಲಿಕೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. "ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ವಲಸೆ ಕಾರ್ಮಿಕರ ಮತ್ತು ಬಡವರ ಮಕ್ಕಳ ಜೀವಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ," ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
PublicNext
12/06/2026 09:34 am