ನವದೆಹಲಿ: ಭಾರತೀಯ ಶೂಟಿಂಗ್ ಕ್ರೀಡಾ ಕ್ಷೇತ್ರದ ದಿಗ್ಗಜ, ಖ್ಯಾತ ಕೋಚ್ ಹಾಗೂ ಮಾಜಿ ಶೂಟರ್ ಜಸ್ಪಾಲ್ ರಾಣಾ (49) ಇನ್ನಿಲ್ಲ. ಅನಾರೋಗ್ಯದಿಂದ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಸ್ಪಾಲ್ ರಾಣಾ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳ ಹಿಂದೆ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ವೇಳೆ ಜಸ್ಪಾಲ್ ರಾಣಾ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆರಂಭದಲ್ಲಿ ಅದನ್ನು ಅಸಿಡಿಟಿ ಎಂದು ಭಾವಿಸಿದ್ದ ಅವರು ತಮ್ಮ ಪ್ರವಾಸವನ್ನು ಮುಂದುವರಿಸಿದ್ದರು. ಆದರೆ, ಭಾರತಕ್ಕೆ ವಾಪಸ್ ಬರುವ ವಿಮಾನ ಪ್ರಯಾಣದ ಸಂದರ್ಭದಲ್ಲೂ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ದೆಹಲಿ ತಲುಪಿದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್ ಇರುವುದು ಪತ್ತೆಯಾಯಿತು. ತಕ್ಷಣವೇ ಸ್ಟೆಂಟ್ ಅಳವಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮತ್ತೊಂದು ಸ್ಟೆಂಟ್ ಅಳವಡಿಸುವ ಪ್ರಕ್ರಿಯೆ ನಡೆಯಬೇಕಿತ್ತು, ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಜಸ್ಪಾಲ್ ರಾಣಾ ಭಾರತೀಯ ಶೂಟಿಂಗ್ ಕ್ರೀಡೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ಒಲಿಂಪಿಯನ್ ಮನು ಭಾಕರ್ ಅವರ ಯಶಸ್ಸಿನ ಹಿಂದಿನ ಪ್ರಮುಖ ರೂವಾರಿ ಇವರೇ ಆಗಿದ್ದರು. ಅವರ ಮಾರ್ಗದರ್ಶನದಲ್ಲೇ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಪದಕಗಳನ್ನು ಗೆದ್ದುಕೊಟ್ಟಿದ್ದರು. ಶೂಟರ್ ಆಗಿಯೂ ಜಸ್ಪಾಲ್ ರಾಣಾ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನ ನೀಡಿದ್ದರು. 1994, 1998, 2002 ಮತ್ತು 2006ರ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದು ಮಿಂಚಿದ್ದರು. ಕೇವಲ 18ನೇ ವಯಸ್ಸಿನಲ್ಲಿಯೇ 1994ರ ಮಿಲಾನ್ ವಿಶ್ವ ಚಾಂಪಿಯನ್‌ಶಿಪ್‌ನ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು.
PublicNext
12/06/2026 11:29 am