ಮುಂಬೈ: ಚಿತ್ರರಂಗದ ಸೂಪರ್ ಹಿಟ್ ಸಿನಿಮಾ 'ಸಿಂಗಂ' ಶೈಲಿಯಲ್ಲಿ ಮಹಾರಾಷ್ಟ್ರದ ಕಲ್ಯಾಣ್ ಪೊಲೀಸರು ಭರ್ಜರಿ ಆಕ್ಷನ್ ಮೂಡ್‌ಗೆ ಇಳಿದಿದ್ದಾರೆ. ನಡುರಸ್ತೆಯಲ್ಲಿ ಜಗಳವಾಡಿ, ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದ ಗ್ಯಾಂಗ್‌ಸ್ಟರ್‌ಗಳ ಸೊಕ್ಕನ್ನು ಪೊಲೀಸರು ಅರ್ಧರಾತ್ರಿಯಲ್ಲೇ ಮುರಿದಿದ್ದಾರೆ. ಆರೋಪಿಗಳನ್ನು ಅದೇ ರಸ್ತೆಯಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸುವ ಮೂಲಕ ಖಾಕಿ ಪಡೆ ಖಡಕ್ ಸಂದೇಶ ರವಾನಿಸಿದೆ.
ಬುಧವಾರ ರಾತ್ರಿ ಕಲ್ಯಾಣ್ ಪೂರ್ವ ಪ್ರದೇಶದಲ್ಲಿ ಎರಡು ರೌಡಿ ಗ್ಯಾಂಗ್‌ಗಳ ನಡುವೆ ರಸ್ತೆ ಜಗಳ (Road Rage) ಆರಂಭವಾಗಿತ್ತು. ಕೇವಲ ಕ್ಷುಲ್ಲಕ ಕಾರಣಕ್ಕೆ ಶುರುವಾದ ಈ ಗಲಾಟೆ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಎರಡೂ ಗ್ಯಾಂಗ್‌ಗಳ ನಡುವೆ ಭೀಕರ ಶೂಟೌಟ್‌ಗೆ ಕಾರಣವಾಯಿತು. ರೌಡಿಗಳು ನಡುರಸ್ತೆಯಲ್ಲೇ ಪರಸ್ಪರ ಗನ್ ಹಿಡಿದು ಗುಂಡಿನ ಮಳೆಗರೆದಿದ್ದಾರೆ.
ಈ ಗ್ಯಾಂಗ್‌ಸ್ಟರ್‌ಗಳ ನಡುವಿನ ಶೂಟೌಟ್ ವೇಳೆ ಹಾರಿದ ಅಡ್ಡ ಗುಂಡೊಂದು ದಾರಿಯಲ್ಲಿ ಹೋಗುತ್ತಿದ್ದ ರಾಹುಲ್ ವರ್ಮಾ ಎಂಬ ಅಮಾಯಕ ವ್ಯಕ್ತಿಗೆ ತಗುಲಿದೆ. ಸದ್ಯ ರಾಹುಲ್ ವರ್ಮಾ ತೀವ್ರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಡುರಸ್ತೆಯಲ್ಲಿ ಶೂಟೌಟ್ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ರೌಡಿಗಳ ವಿರುದ್ಧ ಕಲ್ಯಾಣ್ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೊಲೀಸರು, ಮಧ್ಯರಾತ್ರಿಯಲ್ಲೇ ಅವರು ಗುಂಡು ಹಾರಿಸಿದ್ದ ಅದೇ ರಸ್ತೆಗೆ ಕರೆತಂದಿದ್ದಾರೆ. ಇಡೀ ಪ್ರದೇಶದ ಜನರೆದುರೇ ಗ್ಯಾಂಗ್‌ಸ್ಟರ್‌ಗಳ ಮೆರವಣಿಗೆ ನಡೆಸಿ, ಕಾನೂನು ಕೈಗೆತ್ತಿಕೊಂಡರೆ ಏನಾಗುತ್ತದೆ ಎಂಬುದನ್ನು ಸಾರ್ವಜನಿಕವಾಗಿ ತೋರಿಸಿಕೊಟ್ಟಿದ್ದಾರೆ. ಸದ್ಯ ಪೊಲೀಸರ ಈ 'ಸಿಂಗಂ' ಶೈಲಿಯ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
PublicNext
12/06/2026 02:46 pm