ತೆಲಂಗಾಣದ ಹೈದರಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಮಾವಿನ ಹಣ್ಣು ಸೇವಿಸಿದ ನಂತರ ಅಸ್ವಸ್ಥಗೊಂಡ ಇಬ್ಬರು ಸಹೋದರಿಯರು ಚಿಕಿತ್ಸೆ ಫಲಿಸದೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರು ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದವರಾದ ಭವಾನಿ ವೈಜಿನಾಥ ಮೇತ್ರೆ (17) ಮತ್ತು ಅವರ ಸಹೋದರಿ ಸಂಧ್ಯಾರಾಣಿ ಮೇತ್ರೆ (14) ಎಂದು ಗುರುತಿಸಲಾಗಿದೆ.
ಮೃತ ಭವಾನಿ ಮತ್ತು ಸಂಧ್ಯಾರಾಣಿ ಅವರು ವೈಜಿನಾಥ್ ಮತ್ತು ಇಂದುಮತಿ ಮೇತ್ರೆ ದಂಪತಿಯ ಐವರು ಹೆಣ್ಣು ಮಕ್ಕಳಲ್ಲಿ ಇಬ್ಬರು. ಬಡತನದಿಂದಾಗಿ, ತಾಯಿ ಇಂದುಮತಿ ತಮ್ಮ ಐವರು ಮಕ್ಕಳೊಂದಿಗೆ ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಹೈದರಾಬಾದ್‌ಗೆ ವಲಸೆ ಬಂದಿದ್ದರು. ಅಲ್ಲಿ ನಾರಾಯಣಗುಡ ಬಡಾವಣೆಯಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಜೂನ್ 8ರಂದು ರಾತ್ರಿ ಮನೆಯಲ್ಲಿ ಊಟ ಮುಗಿದ ನಂತರ, ಮನೆಗೆ ಬಂದಿದ್ದ ಸಂಬಂಧಿಕರು ತಂದಿದ್ದ ಮಾವಿನ ಹಣ್ಣುಗಳನ್ನು ಕುಟುಂಬ ಸದಸ್ಯರು ಸೇವಿಸಿದ್ದಾರೆ. ಇದರ ಬೆನ್ನಲ್ಲೇ, ಎಲ್ಲರೂ ವಾಂತಿ ಮತ್ತು ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಭವಾನಿ ಜೂನ್ 8ರಂದು ಮತ್ತು ಸಂಧ್ಯಾರಾಣಿ ಜೂನ್ 9ರಂದು ಕೊನೆಯುಸಿರೆಳೆದಿದ್ದಾರೆ. ಇಬ್ಬರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮವಾದ ಶೆಂಬೆಳ್ಳಿಯಲ್ಲಿ ನೆರವೇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮೃತ ಸಹೋದರಿಯರ ಮತ್ತೊಬ್ಬ ಅಕ್ಕ ವಿಜಯಶ್ರೀ (19) ಕೂಡ ಮಾವಿನ ಹಣ್ಣು ಸೇವಿಸಿ ಅನಾರೋಗ್ಯಕ್ಕೀಡಾಗಿದ್ದು, ಹೈದರಾಬಾದ್‌ನ ಕಾಚಿಗುಡದಲ್ಲಿರುವ ಶಾಲಿನಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇನ್ನೊಬ್ಬ ಸಹೋದರಿ ಅಮೂಲ್ಯ (16) ಮತ್ತು ತಾಯಿ ಇಂದುಮತಿ ಚೇತರಿಸಿಕೊಂಡಿದ್ದಾರೆ. ಈ ಘಟನೆ ಕುರಿತು ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಬ್ಬರು ಸಹೋದರಿಯರ ಅನುಮಾನಾಸ್ಪದ ಸಾವಿನ ಕುರಿತು ಹಲವು ಪ್ರಶ್ನೆಗಳು ಮೂಡಿವೆ. ಈ ಬಗ್ಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ತೆಲಂಗಾಣ ಸರ್ಕಾರದೊಂದಿಗೆ ಚರ್ಚಿಸಿ, ಈ ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ ನಿಖರ ಕಾರಣವನ್ನು ಪತ್ತೆಹಚ್ಚಬೇಕು ಎಂದು ಮೃತರ ಸಂಬಂಧಿಯೊಬ್ಬರು ಮನವಿ ಮಾಡಿದ್ದಾರೆ. ಅಲ್ಲದೆ, ಮಕ್ಕಳ ಚಿಕಿತ್ಸೆಗಾಗಿ 7-8 ಲಕ್ಷ ರೂಪಾಯಿ ವೆಚ್ಚ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಬಡ ಕುಟುಂಬಕ್ಕೆ ಸರ್ಕಾರ ಸೂಕ್ತ ನೆರವು ನೀಡಬೇಕೆಂದೂ ಒತ್ತಾಯಿಸಿದ್ದಾರೆ.
PublicNext
12/06/2026 12:29 pm