ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ- ರಾಧಾ ಮೋಹನ ದಾಸ್ ಅಗರ್ವಾಲ್

ಮಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಕೈಗೊಳ್ಳಲಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡ ನಾಯಕರ ಮರು ಸೇರ್ಪಡೆ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದಿಂದ ಯಾರನ್ನೂ ಹೊರಹಾಕುವುದು ಬಿಜೆಪಿಗೆ ಸಂತೋಷದ ವಿಷಯವಲ್ಲ. ಸಾಮಾನ್ಯವಾಗಿ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗುತ್ತದೆ. ಬಳಿಕ ಅವರ ನಡವಳಿಕೆ, ಪರಿಸ್ಥಿತಿ ಹಾಗೂ ಪಕ್ಷದ ನಿರ್ಧಾರಗಳ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಯಾವ ಕಾರಣಕ್ಕಾಗಿ ಅವರು ಪಕ್ಷದಿಂದ ಹೊರ ಹೋಗಿದ್ದಾರೆ ಎಂಬುದರ ಬಗ್ಗೆ ಅವರಿಗೇ ಆತ್ಮಾವಲೋಕನ ಆಗಬೇಕು. ರಾಜಕೀಯದಲ್ಲಿ ಸಾಧ್ಯತೆಗಳಿಗೆ ಎಂದಿಗೂ ಬಾಗಿಲು ಮುಚ್ಚಿರುವುದಿಲ್ಲ. ಆದರೆ ಈ ಕುರಿತು ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್, ರಾಜ್ಯಾಧ್ಯಕ್ಷರ ನೇಮಕ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ವಿಷಯವಾಗಿದೆ. ಹಾಲಿ ಅಧ್ಯಕ್ಷರ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರದ ಒಳಜಗಳಗಳು ತಾರಕಕ್ಕೇರಿವೆ ಎಂದು ಆರೋಪಿಸಿದರು. ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಪ್ರತಿವರ್ಷ ಸುಮಾರು ₹53 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಆದರೆ ಅದರ ಪೂರ್ಣ ಪ್ರಯೋಜನ ಜನರಿಗೆ ತಲುಪುತ್ತಿಲ್ಲ ಎಂದು ದೂರಿದರು.

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೇ ನ್ಯಾಯಾಲಯದ ಮೊರೆ ಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದುರ್ಬಲಗೊಳಿಸಿದೆ ಎಂದು ಟೀಕಿಸಿದರು.

ಕಳೆದ ಎರಡು-ಮೂರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ. ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಅಸಮಾಧಾನವಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ಜನಾಕ್ರೋಶ ಐತಿಹಾಸಿಕವಾಗಿ ವ್ಯಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Edited By : Somashekar
PublicNext

PublicNext

13/06/2026 03:14 pm

Cinque Terre

9.48 K

Cinque Terre

0

ಸಂಬಂಧಿತ ಸುದ್ದಿ