ಬೆಂಗಳೂರು: ಚಿಂತಕರ ಚಾವಡಿ ಎಂದೇ ಕರೆಯಲಾಗುವ ವಿಧಾನ ಪರಿಷತ್ ನ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆ ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಇದೀಗ ಆಡಳಿತರೂಢ ಕಾಂಗ್ರೆಸ್, ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಕ್ಷಗಳ ಶಾಸಕರೂ ತಮ್ಮ ತಮ್ಮ ವರಿಷ್ಠರ ಸೂಚನೆ ಮೇರೆಗೆ ಖಾಸಗಿ ರೆಸಾರ್ಟ್ ಗಳತ್ತ ಮುಖಮಾಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಬಿಡದಿ ಬಳಿ ಇರುವ ವಂಡರ್ ಲಾ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದಾರೆಂದು ಹೇಳಲಾಗುತ್ತಿದ್ದು, ವಿಧಾನಪರಿಷತ್ ನ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯ ಕುರಿತು ಶಾಸಕರಿಗೆ ಪೂರ್ವ ತರಬೇತಿ ನೀಡುವ ಉದ್ದೇಶದಿಂದ ಒಂದು ಕಡೆ ಸೇರಿಸಲಾಗಿದೆಯೇ ಹೊರತು ಇದು ರೆಸಾರ್ಟ್ ರಾಜಕೀಯವಲ್ಲ ಅನ್ನೋದು ಕಾಂಗ್ರೆಸ್ ಮುಖಂಡರ ಸಮಜಾಯಿಷಿ ಅಷ್ಟೆ. ಮತ್ತೊಂದೆಡೆ ತಾವೇನೂ ಕಮ್ಮಿ ಇಲ್ಲವೆಂಬಂತೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳೂ ಬೇರೆ ಬೇರೆ ಸ್ಥಳಗಳಲ್ಲಿ ತಮ್ಮ ತಮ್ಮ ಶಾಸಕರನ್ನು ಇರಿಸಿದ್ದಾರೆಂದು ಹೇಳಲಾಗುತ್ತಿದೆ. ಇದೇ ತಿಂಗಳ 18 ರಂದು ವಿಧಾನಪರಿಷತ್ ನ ಖಾಲಿಯಾಗಿರುವ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನಿಂದ ನಾಲ್ವರು, ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ. ಆದರೆ, ಪ್ರಾಶಸ್ತ್ಯ ಮತ್ತು ಹೆಚ್ಚುವರಿ ಮತಗಳ ಆಧಾರದಲ್ಲಿ ಐದನೇ ಅಭ್ಯರ್ಥಿಯನ್ನು ಗೆಲ್ಲಿಸುವ ತಂತ್ರ ರೂಪಿಸಿರುವ ಸಿಎಂ ಡಿಕೆಶಿ ಅವರು ತಮ್ಮ ಆಪ್ತ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದ್ದು ಮಹತ್ವ ಪಡೆದುಕೊಂಡಿದೆ. ಇನ್ನು, ಇದಕ್ಕೆ ಪೈಪೋಟಿ ಎಂಬಂತೆ ಜೆಡಿಎಸ್ ಎಂಟನೇ ಅಭ್ಯರ್ಥಿಯಾಗಿ ಗೋವಿಂದರಾಜು ಅವರನ್ನು ಚುನಾವಣಾ ಕಣಕ್ಕಿಳಿಸಿರೋದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಚುನಾವಣೆ ಕಣ ಮತ್ತಷ್ಟು ರಂಗೇರುವಂತೆ ಮಾಡಿದೆ.
PublicNext
13/06/2026 07:57 pm