ಬೆಂಗಳೂರು : "ತಲೆ ಬಾಚ್ಕೊಳಿ... ಪೌಡ್ರು ಹಾಕೊಳಿ... ದುನಿಯಾ ತುಂಬಾ ಕಾಸ್ಟ್ಲಿ" ಎಂಬ ವಿಶಿಷ್ಟ ಡೈಲಾಗ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿ, ಇಂದು ಸ್ಯಾಂಡಲ್‌ವುಡ್‌ನ ಅನಿವಾರ್ಯ ನಟರಾಗಿ ಬೆಳೆದಿರುವವರು ರಂಗಾಯಣ ರಘು. ರಂಗಭೂಮಿಯ ಹಿನ್ನೆಲೆಯಿಂದ ಬಂದು ತಮ್ಮ ಅದ್ಭುತ ನಟನೆಯ ಮೂಲಕ ಕೋಟ್ಯಂತರ ಸಿನಿಮಾ ಪ್ರೇಮಿಗಳನ್ನು ರಂಜಿಸಿರುವ ಅವರು, ಈಗ ತಮ್ಮ ನಟನಾ ಪಯಣದಲ್ಲಿ 400ನೇ ಸಿನಿಮಾದ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಹೆಮ್ಮೆಯ ಚಿತ್ರಕ್ಕೆ 'ಹೊಸ ಜೀವನ' ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಚಿತ್ರದ ಆಕರ್ಷಕ ಶೀರ್ಷಿಕೆಯನ್ನು 'ನಟರಾಕ್ಷಸ' ಡಾಲಿ ಧನಂಜಯ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಹಿಂದೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಮೋಹನ್ ಕುಮಾರ್ ಹನುಮಯ್ಯ ಅವರು ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಹೊಸ ಜೀವನ ಸಿನಿಮಾದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್ ಹಾಗೂ ಉದಯ್ ಆಚಾರ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರವು ಸ್ನೇಹ, ಪ್ರೀತಿ, ಜೀವನದ ಹೋರಾಟ ಮತ್ತು ನೈತಿಕ ಮೌಲ್ಯಗಳ ಸುತ್ತ ಸಾಗುವ ಸುಂದರ ಕಥಾಹಂದರವನ್ನು ಹೊಂದಿದೆ. ಚಿತ್ರದ ತಾಂತ್ರಿಕ ತಂಡವೂ ಬಲಿಷ್ಠವಾಗಿದ್ದು, ಜಿ.ಎಸ್. ಸಂಜೀವ್ ಪ್ರಸಾದ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನಿರ್ದೇಶಕ ಮೋಹನ್ ಕುಮಾರ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದು, 'ಅರ್ಜುನ್ ಪ್ರೊಡಕ್ಷನ್' ಹಾಗೂ 'ಚಿರು ಪ್ರೊಡಕ್ಷನ್' ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಚಿತ್ರಕ್ಕೆ ಸುಮುಖ ರಾವ್ ಸಂಗೀತ ನೀಡಿದ್ದರೆ, ಸುನಾದ್ ಗೌತಮ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಉಳಿದಂತೆ ರಾಜ್ ಕಾಂತ್ ಎಸ್ ಅವರ ಛಾಯಾಗ್ರಹಣ, ಶಶಿಧರ್ ಗೌಡ ಅವರ ಸಂಕಲನ ಹಾಗೂ ಪ್ರತಾಪ್ ಎಂ.ಆರ್. ಅವರ ಸಂಭಾಷಣೆ ಈ ಚಿತ್ರಕ್ಕಿದೆ. ರಂಗಾಯಣ ರಘು ಅವರ ಈ ವಿಶೇಷ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿ ಎಂಬುದು ಚಿತ್ರಪ್ರೇಮಿಗಳ ಆಶಯವಾಗಿದೆ.
PublicNext
13/06/2026 02:41 pm