ಕಾಪು: ಸ್ಥಳೀಯ ರೈತರಿಗೆ ಪ್ರೋತ್ಸಾಹ ನೀಡುವ ಹಾಗೂ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಶಕ್ತಿ ಇವೆಂಟ್ಸ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ಹಲಸು ಮತ್ತು ಮಾವು ಮೇಳ ಭಾರೀ ಜನಾಕರ್ಷಣೆಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಾಂಪ್ರದಾಯಿಕ ಬೆಳೆಗಳಾದ ಹಲಸು ಮತ್ತು ಮಾವಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಜೊತೆಗೆ ರೈತರು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಮೂರು ದಿನಗಳ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ವಿವಿಧ ತಳಿಗಳ ಹಲಸು ಹಾಗೂ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು, ಅವುಗಳಿಂದ ತಯಾರಿಸಲಾದ ವಿಶೇಷ ಖಾದ್ಯಗಳನ್ನೂ ಪರಿಚಯಿಸಲಾಗುತ್ತಿದೆ.
ಜೂನ್ 12ರಿಂದ 14ರವರೆಗೆ ಶ್ರೀ ಹಳೇ ಮಾರಿಗುಡಿ ಸಭಾಂಗಣದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ಅಪರೂಪದ ಮತ್ತು ರುಚಿಕರ ತಳಿಯ ಹಲಸು ಹಾಗೂ ಮಾವಿನ ಹಣ್ಣುಗಳೊಂದಿಗೆ ಮೌಲ್ಯವರ್ಧಿತ ಉತ್ಪನ್ನಗಳಾದ ಹಪ್ಪಳ, ಉಪ್ಪಿನಕಾಯಿ, ಜ್ಯೂಸ್, ಸಿಹಿತಿಂಡಿಗಳು ಹಾಗೂ ಇತರ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಇದಲ್ಲದೆ ಹಲಸಿನ ಕಡುಬು, ಪಾಯಸ, ಮಾವಿನ ರಸಾಯನ ಸೇರಿದಂತೆ ಸಾಂಪ್ರದಾಯಿಕ ಖಾದ್ಯಗಳ ಮಳಿಗೆಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ರೈತರಿಗೆ ಉತ್ತಮ ವ್ಯಾಪಾರಾವಕಾಶ ದೊರೆಯುತ್ತಿದ್ದರೆ, ಗ್ರಾಹಕರು ತಾಜಾ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಖರೀದಿಸುವ ಅವಕಾಶದಿಂದ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕಾಪುವಿನ ಹಲಸು–ಮಾವು ಮೇಳದಲ್ಲಿ ಖರೀದಿಯ ಭರಾಟೆ ಜೋರಾಗಿದ್ದು, ಮೇಳ ಎಲ್ಲರ ಗಮನ ಸೆಳೆಯುತ್ತಿದೆ.
PublicNext
14/06/2026 07:50 am