ಕಾಪು: ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಬೆಳಪುವಿನಲ್ಲಿ ನಿರ್ಮಿಸಲಾಗುತ್ತಿರುವ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಾಮಗಾರಿ ಆರಂಭಗೊಂಡು ದಶಕ ಕಳೆದರೂ ಪೂರ್ಣಗೊಂಡಿಲ್ಲ!
141.08 ಕೋಟಿ ರೂಪಾಯಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತದ 53.85 ಕೋಟಿ ರೂಪಾಯಿ ಕಾಮಗಾರಿಗೆ 2015ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು.
ಯೋಜನಾ ಪ್ರದೇಶದಲ್ಲಿ ಆಡಳಿತ ಸೌಧ, ಅತಿಥಿಗೃಹ, ಸಂಶೋಧನಾ ಕೇಂದ್ರ, ವಸತಿಗೃಹ ಸೇರಿದಂತೆ ಹಲವು ಕಟ್ಟಡಗಳು ಶೇ.80ರಿಂದ 85ರಷ್ಟು ಪೂರ್ಣಗೊಂಡಿವೆ. ಆದರೆ, ಅನುದಾನದ ಕೊರತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಅಳವಡಿಕೆಯಲ್ಲಿ ಉಂಟಾದ ವಿಳಂಬದಿಂದಾಗಿ ತರಗತಿಗಳು ಇನ್ನೂ ಆರಂಭವಾಗಿಲ್ಲ.
ಬಳಕೆಯಾಗದೆ ಉಳಿದಿರುವ ಕಟ್ಟಡಗಳು ಹಾಳಾಗತೊಡಗಿದ್ದು, ಕಿಟಕಿಗಳ ಗಾಜುಗಳು ಒಡೆಯುವುದು, ಅನೈತಿಕ ಚಟುವಟಿಕೆಗಳಿಗೆ ಅವಕಾಶವಾಗುವುದು ಹಾಗೂ ಬೀದಿನಾಯಿಗಳ ಆಶ್ರಯತಾಣವಾಗುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯನ್ನು ಕಾರ್ಯಗತಗೊಳಿಸುವ ಭರವಸೆಯನ್ನು ಹಲವು ಶಿಕ್ಷಣ ಸಚಿವರು ನೀಡಿದ್ದರೂ, ಇದುವರೆಗೆ ಯಾವುದೇ ಸ್ಪಷ್ಟ ಪ್ರಗತಿ ಕಂಡು ಬಂದಿಲ್ಲ. ಕೇಂದ್ರವನ್ನು ಶೀಘ್ರ ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಬೇಕೆಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.
PublicNext
14/06/2026 06:36 pm
LOADING...