ಬೈಂದೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸೋದ್ಯಮ ತಾಣವಾದ ತ್ರಾಸಿ - ಮರವಂತೆ ಬೀಚ್‌ಗೆ ಭಾನುವಾರ ಪ್ರವಾಸಿಗರ ಹರಿವು ಹೆಚ್ಚಾಗಿದ್ದು, ಇದೇ ವೇಳೆ ಪ್ರವಾಸಿಗರ ಸುರಕ್ಷತೆಯ ವಿಚಾರದಲ್ಲಿ ಜಿಲ್ಲಾಡಳಿತದ ನಿಯಮಗಳು ಗಾಳಿಗೆ ತೂರಿರುವುದು ಬೆಳಕಿಗೆ ಬಂದಿದೆ.
ಪ್ರವಾಸಿಗರು ಅಪಾಯಕಾರಿ ಸಮುದ್ರ ಪ್ರದೇಶಕ್ಕೆ ಇಳಿಯದಂತೆ ತಡೆಯಲು ಜಿಲ್ಲಾಡಳಿತವು ಬೀಚ್ ಉದ್ದಕ್ಕೂ ಸುರಕ್ಷತಾ ನೆಟ್ ಅಳವಡಿಸಲು ಆದೇಶ ನೀಡಿತ್ತು. ಆದರೆ, ಮರವಂತೆ ಅಂಗಡಿಗಳ ಸಮೀಪದ ಕೆಲವು ಆಯಕಟ್ಟಿನ ಭಾಗಗಳಲ್ಲಿ ಮಾತ್ರ ನೆಟ್ ಅಳವಡಿಸದೆ ಹಾಗೇ ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನೆಟ್ ಇಲ್ಲದ ಈ ಮುಕ್ತ ಪ್ರದೇಶಗಳ ಮೂಲಕವೇ ಪ್ರವಾಸಿಗರು ಯಾವುದೇ ಭಯವಿಲ್ಲದೆ ಸಮುದ್ರದ ಅಂಚಿಗೆ ಇಳಿದು ಓಡಾಡುತ್ತಿದ್ದಾರೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದ್ದರೂ ಸುರಕ್ಷತಾ ಕ್ರಮಗಳ ಅನುಷ್ಠಾನದಲ್ಲಿ ಇಂತಹ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಪ್ರಭಾವಿಗಳ ಹಿತಾಸಕ್ತಿಗಾಗಿ ಇಲ್ಲಿ ನೆಟ್ ಅಳವಡಿಸದೆ ವಿನಾಯಿತಿ ನೀಡಲಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಇದೇ ಲೋಪದ ಕುರಿತು ಮಾಧ್ಯಮ ಪ್ರತಿನಿಧಿಗಳು ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದಾಗ, ಸ್ಥಳೀಯ ಅಂಗಡಿ ಮಾಲೀಕರ ಪರವಾಗಿ ಬಂದ ವ್ಯಕ್ತಿಯೊಬ್ಬ ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ, ಚಿತ್ರೀಕರಣಕ್ಕೆ ಅಡ್ಡಿ ಪಡಿಸಲು ಯತ್ನಿಸಿ ದರ್ಪ ತೋರಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಸಾರ್ವಜನಿಕರ ಜೀವ ರಕ್ಷಣೆಗಾಗಿ ಜಾರಿಗೊಳಿಸಿರುವ ಸುರಕ್ಷತಾ ನಿಯಮಗಳನ್ನು ಬೀಚ್‌ನ ಎಲ್ಲಾ ಭಾಗಗಳಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಪ್ರವಾಸಿಗರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಈ ಕೂಡಲೇ ಎಚ್ಚೆತ್ತುಕೊಂಡು ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು. ಹಾಗೆಯೇ, ಕರ್ತವ್ಯ ನಿರತ ಮಾಧ್ಯಮ ಪ್ರತಿನಿಧಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೂಕ್ತ ಭದ್ರತೆ ಒದಗಿಸಬೇಕು ಎಂಬ ಒತ್ತಾಯ ಬಲವಾಗಿದೆ.
ವರದಿ: ದಾಮೋದರ ಮೊಗವೀರ ನಾಯಕವಾಡಿ, ಪಬ್ಲಿಕ್ ನೆಕ್ಸ್ಟ್, ಬೈಂದೂರು
PublicNext
15/06/2026 07:52 am