ತುಮಕೂರು : ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿ ಒಂದೇ ಜಮೀನನ್ನು ಇಬ್ಬರಿಗೆ ಮಾರಿ ವಂಚಿಸಿರುವ ಜಾಲ ಬೆಳಕಿಗೆ ಬಂದಿದ್ದು, ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕುಣಿಗಲ್ ತಾಲ್ಲೂಕಿನ ಯಡಿಯೂರು ಹೋಬಳಿ ಮಧುರೆ ಕಾವಲ್ ಗ್ರಾಮದ ಸರ್ವೆ ನಂಬರ್ 1/p-p44 ರಲ್ಲಿದ್ದ ನಾಲ್ಕು ಎಕರೆ ಭೂಮಿಯನ್ನು ಇಬ್ಬರಿಗೆ ಮಾರಾಟ ಮಾಡಿ ಈ ವಂಚನೆ ಮಾಡಲಾಗಿದೆ.
ಯಲ್ಲಾಪುರ ಗ್ರಾಮದ ಲೋಕೇಶ್, ಪುಟ್ಟಮ್ಮ, ರತ್ನಮ್ಮ, ಶಶಿಧರ, ಗಂಗಮ್ಮ ಮತ್ತು ಬೆಂಗಳೂರಿನ ಇಂದ್ರೇಶ್ ಎಂಬುವರ ವಿರುದ್ಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆರೋಪಿ ಲೋಕೇಶ್ 2007 ರಲ್ಲೇ ಈ ನಾಲ್ಕು ಎಕರೆ ಜಮೀನನ್ನು ಕೋಡಿಪಾಳ್ಯ ಗ್ರಾಮದ ಚಿಕ್ಕಣ್ಣ ಎಂಬುವರಿಗೆ 1 ಲಕ್ಷದ 12 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಜಮೀನಿನ ಪಹಣಿ ಮತ್ತು ಖಾತೆ ಕೂಡ ಚಿಕ್ಕಣ್ಣ ಅವರ ಹೆಸರಲ್ಲೇ ಇತ್ತು. ಆದರೆ, ಇದನ್ನು ಮರೆಮಾಚಿ 2014 ರಲ್ಲಿ ಅದೇ ಜಮೀನನ್ನು ಬೆಂಗಳೂರಿನ ಇಂದ್ರೇಶ್ ಎಂಬುವರಿಗೆ 11 ಲಕ್ಷ ರೂಪಾಯಿಗೆ ಮತ್ತೊಮ್ಮೆ ಮಾರಾಟ ಮಾಡಿದ್ದಾನೆ.
ಈ ಬಾರಿ ರಿಜಿಸ್ಟ್ರೇಷನ್ ಮಾಡಿಸದೆ ಕೇವಲ ಕ್ರಯಪತ್ರದ ಆಧಾರದ ಮೇಲೆ ವ್ಯವಹಾರ ನಡೆಸಲಾಗಿದೆ.
ಬಳಿಕ ಇಂದ್ರೇಶ್ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ತೀರ್ಪಿನಂತೆ ಆತನ ಹೆಸರು ಇಸಿಗೆ ಋಣಭಾರ ಪ್ರಮಾಣಪತ್ರ ಸೇರ್ಪಡೆಯಾಗಿದೆ.
ಮೊದಲೇ ಜಮೀನು ಮಾರಿದ್ದ ಲೋಕೇಶ್, ಈಗ ಬೆಂಗಳೂರಿನ ಇಂದ್ರೇಶ್ ಜೊತೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..
PublicNext
16/06/2026 10:51 pm