ಸಕಲೇಶಪುರ: ಕಸಬಾ ಹೋಬಳಿ ಬೆಳೆಗಾರರ ಸಂಘ ಒಂದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸಭೆಯನ್ನು ವಿಶೇಷ ವಾರ್ಷಿಕ ಸಭೆಯ ಮಾದರಿಯಲ್ಲಿ ಆಯೋಜಿಸಲಾಗಿತ್ತು, ಹೋಬಳಿ ಬೆಳೆಗಾರರ ಸಂಘದ ಮಾಸಿಕ ಸಭೆಯು ನಗರದ ರಾಘವೇಂದ್ರ ನಗರದ ಹೆಚ್‌ಡಿಪಿಎ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ.ಬಿ. ಮೇಘರಾಜ್ ಅವರು ಸಭೆಯಲ್ಲಿ ಹಾಜರಿದ್ದ ಗಣ್ಯರು, ಹಿರಿಯ ಬೆಳೆಗಾರರು ಹಾಗೂ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘವು ಕೈಗೊಂಡ ವಿವಿಧ ರೈತಪರ ಕಾರ್ಯಕ್ರಮಗಳು, ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಿದ ಪ್ರಯತ್ನಗಳು ಹಾಗೂ ಸಂಘದ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. "ಕಾಫಿ ಬೆಳೆಗಾರರು ಕೇವಲ ಉತ್ಪಾದಕರಾಗಿರದೆ ಉದ್ಯಮಿಗಳಾಗಿಯೂ ಬೆಳೆಯಬೇಕು. ಮಾರುಕಟ್ಟೆಯ ಬೇಡಿಕೆ, ಗುಣಮಟ್ಟ ಹಾಗೂ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಿದರೆ ಮಲೆನಾಡಿನ ಕಾಫಿಗೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಮಾನ್ಯತೆ ದೊರೆಯಲಿದೆ" ಎಂದು ಮೇಘರಾಜ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರು ಕಾಫಿ ಉದ್ಯಮದ ಪ್ರಸ್ತುತ ಪರಿಸ್ಥಿತಿ, ಕಾಫಿ ಮಂಡಳಿಯ ಯೋಜನೆಗಳು ಹಾಗೂ ಭವಿಷ್ಯದ ಅವಕಾಶಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು.
"ಭಾರತೀಯ ಕಾಫಿಗೆ ಇಂದು ವಿಶ್ವದಾದ್ಯಂತ ಅಪಾರ ಬೇಡಿಕೆಯಿದೆ. ಆದರೆ ನಮ್ಮ ಉತ್ಪನ್ನದ ಮೌಲ್ಯವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಪರಿಚಯಿಸುವಲ್ಲಿ ನಾವು ಇನ್ನಷ್ಟು ಪ್ರಯತ್ನಿಸಬೇಕಿದೆ. ಪ್ರತಿಯೊಬ್ಬ ಕಾಫಿ ಬೆಳೆಗಾರರೂ ತಮ್ಮದೇ ಬ್ರಾಂಡ್ ನಿರ್ಮಿಸಿ ನೇರ ಮಾರುಕಟ್ಟೆ ವ್ಯವಸ್ಥೆಯತ್ತ ಹೆಜ್ಜೆ ಇಟ್ಟರೆ ಹೆಚ್ಚಿನ ಆದಾಯ ಗಳಿಸಬಹುದು" ಎಂದು ಸಲಹೆ ನೀಡಿದರು.
ಕಾರ್ಮಿಕರ ಕೊರತೆ ಕುರಿತು ಮಾತನಾಡಿದ ಅವರು, "ಕಾಫಿ ಉದ್ಯಮದ ಪ್ರಮುಖ ಸವಾಲು ಕಾರ್ಮಿಕರ ಅಭಾವವಾಗಿದೆ. ಕಾಫಿ ಮಂಡಳಿಯ ಅನುಮೋದನೆ ಹಾಗೂ ಸರ್ಕಾರದ ಸಹಯೋಗದೊಂದಿಗೆ ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ನಿಯಮಾನುಸಾರವಾಗಿ ಕರೆತಂದು ತೋಟಗಳಲ್ಲಿ ಉದ್ಯೋಗ ಕಲ್ಪಿಸುವ ಕುರಿತು ಚರ್ಚೆ ನಡೆಸಬಹುದು" ಎಂದು ಹೇಳಿದರು.
ಸಭೆಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎ.ಎಸ್. ಪರಮೇಶ್ ಹಾಗೂ ನಿಕಟಪೂರ್ವ ಗೌರವ ಕಾರ್ಯದರ್ಶಿ ಕೆ.ಬಿ. ಲೋಹಿತ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯ ವಿಶೇಷ ಆಕರ್ಷಣೆಯಾಗಿ ತೋಟಗಳಲ್ಲಿ ವಿವಿಧ ಹಂತಗಳಲ್ಲಿ ಅಗತ್ಯವಿರುವ ಕಾರ್ಮಿಕರ ಸಂಖ್ಯೆ, ಕಾಫಿ, ಮೆಣಸು, ಅಡಿಕೆ ಹಾಗೂ ಏಲಕ್ಕಿ ಬೆಳೆಗಳಲ್ಲಿ ಪ್ರತಿ ತಿಂಗಳು ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಒಳಗೊಂಡ "ಗೆಣತಿ" ಪುಸ್ತಕವನ್ನು ಬಿಡುಗಡೆ ಮಾಡಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಬೆಳೆಗಾರರಿಗೆ ಉಚಿತವಾಗಿ ವಿತರಿಸಲಾಯಿತು. ಕಾಫಿ ಉದ್ಯಮದ ಸುಸ್ಥಿರ ಅಭಿವೃದ್ಧಿಗೆ ಬೆಳೆಗಾರರು, ಸಂಘಟನೆಗಳು ಹಾಗೂ ಕಾಫಿ ಮಂಡಳಿ ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
PublicNext
18/06/2026 12:56 pm