ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಗೋ ಹತ್ಯೆ, ಅಕ್ರಮ ಮತಾಂತರ ವಿರೋಧಿಸಿ ವಿಹಿಂಪ –ಬಜರಂಗದಳ ಬೃಹತ್ ಪ್ರತಿಭಟನೆ

ಸಕಲೇಶಪುರ: ಗೋ ಹತ್ಯೆ, ಅಕ್ರಮ ಮತಾಂತರ, ಮಹಿಳೆಯರ ಸುರಕ್ಷತೆ ಹಾಗೂ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಹಾಗೂ ಬಜರಂಗದಳದ ಸಕಲೇಶಪುರ ತಾಲ್ಲೂಕು ಘಟಕದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಎಸಿ ಕಚೇರಿವರೆಗೆ ಸಾಗಿತು. ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಸಕಲೇಶಪುರ ಭಾಗದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇತ್ತೀಚೆಗೆ ಬೆಳಕಿಗೆ ಬಂದಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳೆಯರನ್ನು ಪ್ರೀತಿ ಹಾಗೂ ವಿವಾಹದ ಹೆಸರಿನಲ್ಲಿ ವಂಚಿಸುವುದು, ಕಿರುಕುಳ ನೀಡುವುದು ಅಥವಾ ಬಲವಂತದ ಮತಾಂತರಕ್ಕೆ ಪ್ರೇರೇಪಿಸುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೆ, ಆಮಿಷ, ಒತ್ತಡ ಅಥವಾ ಬಲವಂತದ ಮೂಲಕ ನಡೆಯುವ ಯಾವುದೇ ಅಕ್ರಮ ಮತಾಂತರ ಚಟುವಟಿಕೆಗಳನ್ನು ತಡೆಗಟ್ಟುವಂತೆ ಸರ್ಕಾರವನ್ನು ಒತ್ತಾಯಿಸಿದರು. ಕಾನೂನುಬಾಹಿರವಾಗಿ ವಾಸಿಸುತ್ತಿರುವ ಅಕ್ರಮ ವಲಸಿಗರ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.

ಹಿಂದೂ ಸಮಾಜದ ಹಿತಾಸಕ್ತಿಗಳ ರಕ್ಷಣೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಮೈಪಾಲ್, ಜಿಲ್ಲಾ ಕಾರ್ಯದರ್ಶಿ ಹರೀಶ್ ಕರಡಿಗಾಲ, ಬಾಲಕೃಷ್ಣ, ವಿಜಯ್ ಕುಮಾರ್, ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರಾದ ರಘು ಸಕಲೇಶಪುರ, ಕೌಶಿಕ್, ಬಜರಂಗದಳದ ವಿಷ್ಣು, ಸೃಜನ್, ರಘು ಬಾಳೆಗದ್ದೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವತ್, ಆರ್‌ಎಸ್‌ಎಸ್ ಪ್ರಮುಖರಾದ ಸತ್ಯನಾರಾಯಣ ಗುಪ್ತ, ನಂದನ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Edited By :
PublicNext

PublicNext

19/06/2026 02:33 pm

Cinque Terre

5.83 K

Cinque Terre

0

ಸಂಬಂಧಿತ ಸುದ್ದಿ