ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊನೆ ಕ್ಷಣದಲ್ಲಿ ಇರಾನ್-ಅಮೆರಿಕ ಶಾಂತಿ ಒಪ್ಪಂದ ವಿಫಲ : ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ!

ಅಮೆರಿಕ ಮತ್ತು ಇರಾನ್ ನಡುವಿನ ಬಹುನಿರೀಕ್ಷಿತ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುವ ಹಂತದಲ್ಲೇ ಸಂಧಾನ ಪ್ರಕ್ರಿಯೆ ಮುರಿದುಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ‘ಇಸ್ಲಾಮಾಬಾದ್ ಶಾಂತಿ ಒಪ್ಪಂದ’ವನ್ನು ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸಲು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಇರಾನ್ ಕೊನೆಕ್ಷಣದಲ್ಲಿ ಹಿಂದೆ ಸರಿದಿದೆ.

ತೀವ್ರಗಾಮಿಗಳ ಒತ್ತಡವೇ ಇರಾನ್‌ನ ಈ ನಿರ್ಧಾರಕ್ಕೆ ಕಾರಣವಾಗಿದೆ. ಅಮೆರಿಕದ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡರೆ ದೇಶದಲ್ಲಿ ತೀವ್ರ ಜನಾಕ್ರೋಶ ವ್ಯಕ್ತವಾಗಬಹುದು ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್‌ಗೆ ನಿಕಟವಾಗಿರುವ ಮೂಲಗಳು ಎಚ್ಚರಿಸಿದ್ದವು. ಈ ಬೆಳವಣಿಗೆಗಳ ಬೆನ್ನಲ್ಲೇ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಶ್ವೇತಭವನ ಕೂಡ ತಿಳಿಸಿದೆ.

ಅಮೆರಿಕದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಅಮೆರಿಕದ ಅಧಿಕಾರಿಗಳೊಂದಿಗೆ ಹಸ್ತಲಾಘವ ಮಾಡುವ ಅಥವಾ ಟಿವಿ ಕ್ಯಾಮೆರಾಗಳ ಮುಂದೆ ನಗುತ್ತಾ ನಿಲ್ಲುವ ಚಿತ್ರಗಳು ಹೊರಬಂದರೆ, ಅದು ಸಂಘರ್ಷದಲ್ಲಿ ಮಡಿದವರಿಗೆ ಮಾಡುವ ದ್ರೋಹ ಎಂದು ಇರಾನ್‌ನ ಜನ ಭಾವಿಸುತ್ತಾರೆ ಎಂದು ತೀವ್ರಗಾಮಿ ಬಣಗಳು ಎಚ್ಚರಿಸಿದ್ದವು. ಇರಾನಿಯನ್ನರು ಸೇಡು ತೀರಿಸಿಕೊಳ್ಳಲು ಬಯಸುತ್ತಾರೆಯೇ ಹೊರತು, ಸಾರ್ವಜನಿಕ ಸ್ನೇಹದ ಪ್ರದರ್ಶನವನ್ನಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಇರಾನ್ ಒಪ್ಪಂದದಿಂದ ಹಿಂದೆ ಸರಿದಿರುವ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿದೆ. ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿ ರಾತ್ರಿಯಿಡೀ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಹೆಜ್ಬೊಲ್ಲಾ ವರದಿ ಮಾಡಿದೆ.

ಸಾರ್ವಜನಿಕ ಸಮಾರಂಭ ರದ್ದಾಗಿದ್ದರೂ, ಶಾಂತಿ ಒಪ್ಪಂದದ ಮಾತುಕತೆಗಳು ಸಂಪೂರ್ಣವಾಗಿ ಮುರಿದುಬಿದ್ದಿಲ್ಲ ಎಂಬ ಸಮಾಧಾನಕರ ಸಂಗತಿಯೂ ಇದೆ. ಇನ್ನು ಯಾವುದೇ ಉನ್ನತ ನಾಯಕರು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣಿಸುವುದಿಲ್ಲ. ಬದಲಿಗೆ, ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನದ ತಾಂತ್ರಿಕ ತಂಡಗಳು ಜ್ಯೂರಿಚ್‌ನಲ್ಲಿ ಬೀಡುಬಿಟ್ಟಿದ್ದು, ಮುಂದಿನ 60 ದಿನಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿ ಅಂತಿಮ ಒಪ್ಪಂದದ ವಿವರಗಳನ್ನು ಸಿದ್ಧಪಡಿಸಲಿವೆ.

ಆದರೆ, ಇರಾನ್ ಬಳಿ ಇನ್ನೂ ನೂರಾರು ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಇರುವುದರಿಂದ, ಈ ಒಪ್ಪಂದ ಎಷ್ಟು ಯಶಸ್ವಿಯಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಅಮೆರಿಕವು ಇರಾನ್ ಮೇಲಿನ ಕರಾವಳಿ ನೌಕಾ ದಿಗ್ಬಂಧನವನ್ನು ತೆಗೆದುಹಾಕುವ ಮೂಲಕ ಒಪ್ಪಂದದ ಮೊದಲ ಹೆಜ್ಜೆಯನ್ನು ಇಟ್ಟಿದೆ.

Edited By :
PublicNext

PublicNext

19/06/2026 12:13 pm

Cinque Terre

19.79 K

Cinque Terre

5

ಸಂಬಂಧಿತ ಸುದ್ದಿ