ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಅಧಿವೇಶನದಲ್ಲಿ ಭಾರತವು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವಂತಹ ಪ್ರಬಲ ರಾಜತಾಂತ್ರಿಕ ಪೆಟ್ಟು ನೀಡಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟ ನಂತರ, ಭಾರತವು 1960ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು.
ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಪ್ರಶ್ನಿಸಲು ಬಂದ ಪಾಕಿಸ್ತಾನಕ್ಕೆ ಭಾರತದ ಪ್ರಥಮ ಕಾರ್ಯದರ್ಶಿ ಅನುಪಮಾ ಸಿಂಗ್ ದಿಟ್ಟ ಉತ್ತರ ನೀಡಿದ್ದಾರೆ. "ಒಂದೆಡೆ ಗಡಿಯಾಚೆಗೆ ಭಯೋತ್ಪಾದನೆಯನ್ನು ಹರಡುತ್ತಾ, ಇನ್ನೊಂದೆಡೆ ನೀರು ಹಂಚಿಕೆ ಒಪ್ಪಂದದಿಂದ ಲಾಭ ಪಡೆಯಲು ಯತ್ನಿಸುವುದು ತರ್ಕಕ್ಕೆ ಮೀರಿದ್ದು. 66 ವರ್ಷಗಳಷ್ಟು ಹಳೆಯದಾದ ಈ ಒಪ್ಪಂದ ಇಂದಿನ ಕಾಲಕ್ಕೆ ಸಂಪೂರ್ಣ ನಿಷ್ಪ್ರಯೋಜಕವಾಗಿದೆ" ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪಾಕಿಸ್ತಾನ ತನ್ನ ಒಟ್ಟು ಕೃಷಿಯ ಶೇಕಡಾ 80ರಷ್ಟು ಮತ್ತು ಕುಡಿಯುವ ನೀರಿನ ಶೇಕಡಾ 93ರಷ್ಟು ಅಗತ್ಯಕ್ಕೆ ಇದೇ ಸಿಂಧೂ ನದಿ ನೀರನ್ನು ಅವಲಂಬಿಸಿದೆ. ಭಾರತವು ಈ ಒಪ್ಪಂದವನ್ನು ನಿಷ್ಪ್ರಯೋಜಕ ಎಂದು ಘೋಷಿಸಿರುವುದು ಪಾಕಿಸ್ತಾನದ ಬೆನ್ನುಮೂಳೆ ಮುರಿದಂತಾಗಿದೆ.
ಪಾಕಿಸ್ತಾನವನ್ನು 'ಫ್ರಾಂಕೆನ್‌ಸ್ಟೈನ್ ಸ್ಟೇಟ್' ಎಂದು ಕರೆದ ಅನುಪಮಾ ಸಿಂಗ್, "ಪಾಕಿಸ್ತಾನವು ತಾನೇ ಭಯೋತ್ಪಾದಕ ಸಂಘಟನೆಗಳನ್ನು ಸಾಕಿ ಬೆಳೆಸಿದ ರಾಕ್ಷಸ ದೇಶ. ಈಗ ಅದೇ ರಾಕ್ಷಸರು ತಿರುಗಿ ತನ್ನನ್ನೇ ಕಚ್ಚುತ್ತಿರುವಾಗ ಪಾಕಿಸ್ತಾನ ಜಗತ್ತಿನೆದುರು ಆಶ್ಚರ್ಯದ ನಾಟಕವಾಡುತ್ತಿದೆ. ಅವರದೇ ರಕ್ಷಣಾ ಸಚಿವರು ಉಗ್ರರಿಗೆ ತರಬೇತಿ ನೀಡುವುದಾಗಿ ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ. ಇಂತಹ ದ್ವಂದ್ವ ನೀತಿ ಜಗತ್ತಿಗೆ ಗೊತ್ತಿದೆ" ಎಂದು ತೀವ್ರವಾಗಿ ಛೀಮಾರಿ ಹಾಕಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ (PoK) ರಾವಲಕೋಟ್‌ನಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ಕ್ರೂರ ದಮನವನ್ನು ಭಾರತ ಜಾಗತಿಕ ವೇದಿಕೆಯಲ್ಲಿ ಎತ್ತಿ ತೋರಿಸಿದೆ. ಅಲ್ಲಿನ ಜನರು ಆಹಾರ, ವಿದ್ಯುತ್ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರೆ, ಪಾಕ್ ಸರ್ಕಾರ ಅವರ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ. "ಮಿಲಿಟರಿ ಬಲಪ್ರಯೋಗದಿಂದ ಆಕ್ರಮಿಸಿಕೊಂಡಿರುವ ಜಾಗವನ್ನು ದಬ್ಬಾಳಿಕೆಯಿಂದ ಮಾತ್ರ ಉಳಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.
ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸಹಕಾರ ಸಂಸ್ಥೆ (OIC) ಜಂಟಿಯಾಗಿ ಮಾಡಿರುವ ಎಲ್ಲಾ ಆಧಾರರಹಿತ ಆರೋಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಪಾಕಿಸ್ತಾನವು ತನ್ನ ದೇಶದ ಆಂತರಿಕ ದಿವಾಳಿತನ ಮತ್ತು ಹಸಿವಿನ ಬಿಕ್ಕಟ್ಟನ್ನು ಮರೆಮಾಚಲು ಈ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಭಾರತ ತಿರುಗೇಟು ನೀಡಿದೆ.
ಭಾರತದ ರಾಜತಾಂತ್ರಿಕರು ಖಡಕ್ ಸಂದೇಶ ರವಾನಿಸುತ್ತಾ, "ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿತ್ತು, ಇದೆ ಮತ್ತು ಮುಂದೆಯೂ ಇರಲಿದೆ. ಅಲ್ಲಿ ಈಗ ಚರ್ಚಿಸಬೇಕಾದ ಒಂದೇ ಒಂದು ವಿಷಯವೆಂದರೆ ಪಾಕಿಸ್ತಾನವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ನಮ್ಮ ಭಾರತೀಯ ಪ್ರದೇಶಗಳನ್ನು (PoK) ತಕ್ಷಣವೇ ಖಾಲಿ ಮಾಡಿ ನಮಗೆ ಒಪ್ಪಿಸುವುದು ಮಾತ್ರ" ಎಂದು ಸ್ಪಷ್ಟಪಡಿಸಿದ್ದಾರೆ.
PublicNext
19/06/2026 02:32 pm