ಬೆಂಗಳೂರು: ಐತಿಹಾಸಿಕ ನಗರಿ ವಿಜಯಪುರ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ. ಒಂದು ಕಾಲದಲ್ಲಿ "ಧೂಳಿನಪುರ" ಎಂದೇ ಕರೆಯಲ್ಪಡುತ್ತಿದ್ದ ವಿಜಯಪುರ, ಇಂದು ದೇಶದಲ್ಲೇ ಅತ್ಯಂತ ಕಡಿಮೆ ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಹೆಮ್ಮೆಯ ಸ್ಥಾನ ಪಡೆದುಕೊಂಡಿದೆ. ಈ ಅಭೂತಪೂರ್ವ ಪರಿಸರ ಬದಲಾವಣೆಯ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ. ಬಿ. ಪಾಟೀಲ್ ಅವರು ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ತಾವು ಹಮ್ಮಿಕೊಂಡಿದ್ದ ಪರಿಸರ ಆಂದೋಲನ ಇಂದು ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿದೆ ಎಂದು ಸಚಿವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ತಾಪಮಾನ ಹಾಗೂ ಧೂಳಿನ ಪ್ರಮಾಣ ಹೆಚ್ಚಾಗಿರುತ್ತಿದ್ದ ಕಾಲವೊಂದಿತ್ತು. ಆದರೆ, 2016 ರಲ್ಲಿ ಎಂ. ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಹಸಿರು ವಿಜಯಪುರ ನಿರ್ಮಾಣಕ್ಕಾಗಿ 'ಕೋಟಿ ವೃಕ್ಷ ಅಭಿಯಾನ' ಎಂಬ ಬೃಹತ್ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವರ್ಷಗಳ ಕಾಲ ನಿರಂತರವಾಗಿ ನಡೆದ ಈ ಪರಿಸರ ಆಂದೋಲನದ ಫಲವಾಗಿ ಇಂದು ವಿಜಯಪುರ ಜಿಲ್ಲೆ ಹಸಿರಾಗಿ ಕಂಗೊಳಿಸುತ್ತಿರುವುದಲ್ಲದೇ, ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ನಗರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಸಚಿವರ ದೂರದೃಷ್ಟಿಯ ಯೋಜನೆಗೆ ಮತ್ತು ವಿಜಯಪುರ ಜಿಲ್ಲೆಯ ಈ ಐತಿಹಾಸಿಕ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, "ಧೂಳಿನ ಪುರ" ಸದ್ಯ "ಹಸಿರು ಪುರ"ವಾಗಿ ಮಾರ್ಪಟ್ಟಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹದ್ದಾಗಿದೆ ಎಂದು ಸಾರ್ವಜನಿಕರು ಕೊಂಡಾಡುತ್ತಿದ್ದಾರೆ.
PublicNext
19/06/2026 02:47 pm