ಚಿತ್ರದುರ್ಗ: ರಾಜ್ಯದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಹತ್ತಾರು ಸಮಸ್ಯೆಗಳಿಂದ ನರಳುತ್ತಿವೆ. ಗಡಿಭಾಗದ ಶಾಲೆಗಳ ಸ್ಥಿತಿ ಕೂಡಾ ಇದಕ್ಕೆ ಹೊರತಾಗಿಲ್ಲ. ಸಾಲು ಸಾಲು ಸಮಸ್ಯೆಗಳಿಂದ ಗಡಿಯಂಚಿನ ಶಾಲಾ ಮಕ್ಕಳು ನರಳುತ್ತಿದ್ದಾರೆ. ಬೇಸಿಗೆ ರಜೆ ಕಳೆದು ಮರಳಿ ಶಾಲೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಖಾಯಂ ಶಿಕ್ಷಕರಿಲ್ಲದ ಬಿಸಿ ತಟ್ಟಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಆಂಧ್ರ ಗಡಿಯಂಚಿನ ತಾಲ್ಲೂಕು. ಇಡೀ ರಾಜ್ಯದಲ್ಲೇ ಹಿಂದುಳಿದ ಪ್ರದೇಶ ಅನ್ನೋ ಹಣೆಪಟ್ಟಿಯನ್ನೂ ಕೂಡಾ ಕಟ್ಟಿಕೊಂಡಿದೆ. ಇಂಥ ಹಿಂದುಳಿದ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಇಲಾಖೆ ಕಳೆದ ಐದಾರು ವರ್ಷಗಳಿಂದ ಖಾಯಂ ಸಹ ಶಿಕ್ಷಕರ ನೇಮಕ ಮಾಡಿಲ್ಲ. ಇದರಿಂದ ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಇದೇ ತಾಲ್ಲೂಕಿನಲ್ಲಿ ಒಟ್ಟು 143 ಸರ್ಕಾರಿ ಶಾಲೆಗಳಿದ್ದು ಬರೋಬ್ಬರಿ 214 ಸಹ ಶಿಕ್ಷಕರ ಹುದ್ದೆ ಖಾಲಿ ಉಳಿದಿವೆ. ಅಲ್ಲದೇ ಒಟ್ಟು 10 ಶಾಲೆಗಳಲ್ಲಿ ಒಬ್ಬರೇ ಒಬ್ಬ ಖಾಯಂ ಶಿಕ್ಷಕರಿಲ್ಲದೇ ಅತಿಥಿ ಶಿಕ್ಷಕರೇ ಪಾಠ ಪ್ರವಚನ ಮಾಡ್ತಿದ್ದಾರೆ. ಇನ್ನೂ 25ಕ್ಕೂ ಹೆಚ್ಚು ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿದ್ದು, ಶಿಕ್ಷಕ ಕೊರತೆಯಿಂದ ಸರ್ಕಾರಿ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
ಇನ್ನೂ ಸರಾಸರಿ ೪೦೦ಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಕರೇ ಇಲ್ಲವಾಗಿದ್ದು, ಪಾಠ ಪ್ರವಚನಗಳಿಲ್ಲದೇ ವಿದ್ಯಾರ್ಥಿಗಳು ಅಡ್ಡ ಕತ್ತರಿಯಲ್ಲಿ ಸಿಲುಕಿದ್ದಾರೆ. ಕೇವಲ ಇಷ್ಟೇ ಅಲ್ಲದೇ ಶಿಕ್ಷಣ ಇಲಾಖೆ 158ಕ್ಕೂ ಹೆಚ್ಚು ಮಂದಿ ಅತಿಥಿ ಶಿಕ್ಷಕರನ್ನ ಮಂಜೂರು ಮಾಡಲಾಗಿದೆ. ಆದ್ರೆ ಪರ್ಮನೆಂಟ್ ಶಿಕ್ಷಕರಿಲ್ಲದೇ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಇನ್ನೂ ಈ ಕುರಿತು ಶಿಕ್ಷಣ ಸಚಿವರ ಗಮನ ಸೆಳೆಯುವುದಕ್ಕೆ ರಾಜ್ಯದಲ್ಲಿ ಶಿಕ್ಷಣ ಸಚಿವರ ನೇಮಕವಾಗಿಲ್ಲ. ಇತ್ತ ಖಾಯಂ ಶಿಕ್ಷಕರ ನೇಮಕಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಪತ್ರ ಬರೆದರೂ ಕೂಡಾ ಯಾವುದೇ ಪ್ರಯೋಜನವಾಗುತ್ತಿಲ್ಲ.ಒಟ್ಟಾರೆ ಸರ್ಕಾರ ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳುತ್ತಿದೆ. ಆಂಧ್ರ ಗಡಿಭಾಗದ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದೇ, ಗುಣಮಟ್ಟದ ಶಿಕ್ಷಣವಿಲ್ಲದೇ ಮಕ್ಕಳ ಭವಿಷ್ಯ ಅತಂತ್ರವಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸರ್ಕಾರ ಶಿಕ್ಷಣ ಮಂತ್ರಿಗಳ ಜೊತೆ ಖಾಯಂ ಶಿಕ್ಷಕರನ್ನ ನೇಮಕ ಮಾಡಲಿ ಅನ್ನೋದು ನಮ್ಮ ಒತ್ತಾಯ.
PublicNext
20/06/2026 08:22 pm