ಮಂಡ್ಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಮಂಡ್ಯ ತಾಲೂಕಿನ ಕನಸು ಜ್ಞಾನವಿಕಾಸ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಭಾನುವಾರ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಯೋಗೇಶ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಆರೋಗ್ಯದ ಮಹತ್ವ ಹಾಗೂ ಇಂತಹ ಜನಪರ ಕಾರ್ಯಕ್ರಮಗಳ ಅಗತ್ಯತೆಯ ಕುರಿತು ಮಾತನಾಡಿದರು. ಬಳಿಕ ಸ್ಪಂದನ ಆಸ್ಪತ್ರೆಯ ಡಾ. ವರುಣ್ ಅವರು ಆರೋಗ್ಯ ಕಾಪಾಡಿಕೊಳ್ಳುವ ವಿಧಾನಗಳು, ನಿಯಮಿತ ಆರೋಗ್ಯ ತಪಾಸಣೆಯ ಮಹತ್ವ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್), ಇಸಿಜಿ ಹಾಗೂ ಕಣ್ಣಿನ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ನಿರ್ಮಿತ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಜ್ಯೋತಿ, ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಒಟ್ಟು 50 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆರಂಭಿಕ ಹಂತದಲ್ಲೇ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಈ ಶಿಬಿರ ಸಹಕಾರಿಯಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.
Kshetra Samachara
28/07/2026 12:33 pm
LOADING...