ಮುಂಬೈ: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಖ್ಯಾತ ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಒಂದು ರೂಪಾಯಿ ಹಣವನ್ನೂ ಪಡೆದಿಲ್ಲ, ಒಂದು ವೇಳೆ ಹಣ ತಗೊಂಡಿರೋದು ಸಾಬೀತಾದರೆ ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡುತ್ತೇನೆ" ಎಂದು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಫೈಜಲ್ ಅನ್ಸಾರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದಿದ್ದ ನೀಟ್ ವಿರೋಧಿ ಪ್ರತಿಭಟನೆಗೆ ಹಲವು ಸೆಲೆಬ್ರಿಟಿಗಳು ಬೆಂಬಲ ನೀಡಿದ್ದರು. ಆದರೆ, ಈ ಪ್ರತಿಭಟನೆಗೆ ಬೆಂಬಲವಾಗಿ ವಿಡಿಯೋ ಹಾಗೂ ರೀಲ್ಸ್‌ಗಳನ್ನು ಹಂಚಿಕೊಳ್ಳಲು ಸಿಜೆಪಿ ಸ್ಥಾಪಕ ಅಭಿದೀಪ್ ದೀಪ್ಕೆ ಹಣ ನೀಡಿದ್ದಾರೆ ಎಂದು ಫೈಜಲ್ ಅನ್ಸಾರಿ ಗಂಭೀರ ಆರೋಪ ಮಾಡಿದ್ದರು.
ಅದರಲ್ಲೂ ಉರ್ಫಿ ಜಾವೇದ್‌ಗೆ ಬರೋಬ್ಬರಿ 1 ಲಕ್ಷ ರೂಪಾಯಿ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳಲಾಗಿದೆ ಎಂದು ಫೈಜಲ್ ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಫೈಜಲ್ ಅವರ ಆರೋಪಕ್ಕೆ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಕಟುವಾಗಿ ತಿರುಗೇಟು ನೀಡಿರುವ ಉರ್ಫಿ, "1 ಲಕ್ಷ ರೂಪಾಯಿನಾ? ಮೊದಲು ಹೋಗಿ ನನ್ನ ಮಾರ್ಕೆಟ್ ರೇಟ್ ಎಷ್ಟಿದೆ ಅಂತ ತಿಳಿದುಕೊಂಡು ಬನ್ನಿ. ಕೇವಲ ಒಂದು ಲಕ್ಷ ರೂಪಾಯಿಗೆ ನಾನು ರೀಲ್ಸ್ ಮಾಡುತ್ತೀನಾ? ಸದಾ ಪಬ್ಲಿಸಿಟಿಗಾಗಿ ಹಪಹಪಿಸುವ ಈ ವ್ಯಕ್ತಿ ಈ ಹಿಂದೆ 'ಉರ್ಫಿ ಟ್ರಾನ್ಸ್‌ಜೆಂಡರ್' ಎಂದು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದ. ಈತನೊಬ್ಬ ದೊಡ್ಡ ಮೂರ್ಖ" ಎಂದು ಹರಿಹಾಯ್ದಿದ್ದಾರೆ.
ತಮ್ಮ ಬಳಿ ಸದ್ಯ ಯಾವುದೇ ದೊಡ್ಡ ಬ್ರ್ಯಾಂಡ್‌ಗಳಿಲ್ಲ ಹಾಗೂ ಹಣದ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡ ಉರ್ಫಿ, ಯಾವುದೇ ವಿಶ್ವಾಸಾರ್ಹತೆ ಇಲ್ಲದ ವ್ಯಕ್ತಿಯ ಮಾತುಗಳನ್ನು ನಂಬಿ ವರದಿ ಮಾಡುತ್ತಿರುವ ಮಾಧ್ಯಮಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಮೇಲಿನ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿರುವ ಅವರು, "ನಾನು ಹಣ ಪಡೆದಿರುವುದನ್ನು ಯಾರಾದರೂ ಸಾಬೀತುಪಡಿಸಿದರೆ, ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ತಕ್ಷಣವೇ ಡಿಲೀಟ್ ಮಾಡುತ್ತೇನೆ" ಎಂದು ಓಪನ್ ಚಾಲೆಂಜ್ ಎಸೆದಿದ್ದಾರೆ.
PublicNext
05/08/2026 03:35 pm