ಬೆಂಗಳೂರು : ಚಿತ್ರರಂಗದಲ್ಲಿ ವೈವಿಧ್ಯಮಯ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಯಾವತ್ತೂ ವಿಶೇಷ ಆದರವಿರುತ್ತದೆ. ಅದೇ ಸಾಲಿಗೆ ಸೇರಲು ಸಜ್ಜಾಗಿದೆ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಅಭಿನಯದ ಬಹುನಿರೀಕ್ಷಿತ 'ಅಮರ್ಥ' ಸಿನಿಮಾ. ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಮತ್ತು ಗುರು ಹೆಗ್ಡೆ ನಿರ್ಮಿಸಿರುವ ಈ ಚಿತ್ರ ಇದೇ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ಸುಂದರರಾಜ್ ಅವರು ಚಿತ್ರದ ಮೋಷನ್ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸೆನ್ಸಾರ್‌ನಿಂದ ಯು/ಎ (U/A) ಪ್ರಮಾಣಪತ್ರ ಪಡೆದಿರುವ ಈ ಚಿತ್ರವನ್ನು ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ಜಂಟಿಯಾಗಿ ನಿರ್ದೇಶಿಸಿದ್ದಾರೆ. 'ಅಮರ್ಥ' ಎಂದರೆ ಮನುಷ್ಯನ ಗ್ರಹಿಕೆಗೆ ನಿಲುಕದ, ಎಲ್ಲವನ್ನೂ ಮೀರಿದ ಒಂದು ಅದೃಶ್ಯ ಶಕ್ತಿಯಾಗಿದೆ.
ಬಾಲ್ಯದ ಶಾಲಾ ದಿನಗಳಿಂದ ಆರಂಭವಾಗುವ ಸ್ನೇಹಿತರ ಜೀವನ ಪಯಣ, ಕಾಲಾನಂತರದಲ್ಲಿ ಅವರು ಮತ್ತೆ ಒಂದಾದಾಗ ಎದುರಾಗುವ ರೋಚಕ ತಿರುವುಗಳ ಸುತ್ತ ಕಥೆ ಸಾಗುತ್ತದೆ. ಚಿತ್ರದಲ್ಲಿ ಮೇಘನಾ ರಾಜ್ 'ಲಕ್ಷ್ಮೀ' ಎಂಬ ಸಂಕೀರ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಜೀವನದ ಏರಿಳಿತಗಳಲ್ಲಿ ಶ್ರೀನಗರ ಕಿಟ್ಟಿ ಅವರ ಪಾತ್ರ ಹೇಗೆ ಸಾಥ್ ನೀಡುತ್ತದೆ ಎಂಬುದು ಕಥಾವಸ್ತು. ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಸುಂದರ ತಾಣಗಳಲ್ಲಿ 48 ದಿನಗಳ ಕಾಲ ಇದರ ಚಿತ್ರೀಕರಣ ನಡೆಸಲಾಗಿದೆ. ಕೃತಿ ಶೆಟ್ಟಿ, ಉಷಾ ಭಂಡಾರಿ ಸೇರಿದಂತೆ ಬೃಹತ್ ತಾರಾಗಣವಿರುವ ಈ ಭಾವನಾತ್ಮಕ ಹಾಗೂ ಕುತೂಹಲಕಾರಿ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಿದ್ಧವಾಗಿದೆ.
PublicNext
05/08/2026 05:38 pm