ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ: ಕನ್ನಡದ 'ಗಜ' ಸಿನಿಮಾದ ಖ್ಯಾತ ವಿಲನ್ ಪ್ರದೀಪ್ ರಾವತ್ ಇನ್ನಿಲ್ಲ

ಮುಂಬೈ: ಕನ್ನಡದ 'ಗಜ', ತಮಿಳಿನ 'ಗಜಿನಿ', ಹಿಂದಿಯ 'ಲಾಗಾನ್' ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ತಮ್ಮ ಪ್ರಭಾವಿ ಖಳನಾಯಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಹಿರಿಯ ನಟ ಪ್ರದೀಪ್ ರಾವತ್

74ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯನ್ನು ಸಹನಟ ಯಶ್‌ಪಾಲ್ ಶರ್ಮಾ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ ಹಂಚಿಕೊಂಡ ಯಶ್‌ಪಾಲ್ ಶರ್ಮಾ, "ನಮ್ಮ 'ಗಜಿನಿ', 'ಲಾಗಾನ್' ಚಿತ್ರದ ದೇವಾ ಪ್ರದೀಪ್ ರಾವತ್ ಇನ್ನು ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಬರೆದುಕೊಂಡಿದ್ದಾರೆ.

ವರದಿಗಳ ಪ್ರಕಾರ, ಪ್ರದೀಪ್ ರಾವತ್ ಅವರು ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೂ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಪ್ರದೀಪ್ ರಾವತ್ ಅವರು ತಮ್ಮ ಅಭಿನಯ ಪಯಣವನ್ನು ಬಿ.ಆರ್. ಚೋಪ್ರಾ ನಿರ್ದೇಶನದ ಜನಪ್ರಿಯ ದೂರದರ್ಶನ ಧಾರಾವಾಹಿ 'ಮಹಾಭಾರತ' ದಲ್ಲಿ ಅಶ್ವತ್ಥಾಮ ಪಾತ್ರದ ಮೂಲಕ ಆರಂಭಿಸಿದ್ದರು. ನಂತರ 'ತಹಕಿಕಾತ್', 'ಚಂದ್ರಕಾಂತಾ', 'ಯುಗ್', 'ಗುಲ್ ಸನೋಬರ್' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.

ಬಾಲಿವುಡ್‌ನಲ್ಲಿ 'ಐತಬಾರ್' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಅವರು, 'ಅಗ್ನಿಪಥ್', 'ಪತ್ತರ್ ಕೆ ಫೂಲ್', 'ಕೊಯ್ಲಾ', 'ಸರ್ಫರೋಶ್', 'ಲಾಗಾನ್' ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು. ತಮಿಳಿನ 'ಗಜಿನಿ' ಚಿತ್ರದಲ್ಲಿನ ಅವರ ಖಳನಾಯಕ ಪಾತ್ರ ದೇಶಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು.

ಕನ್ನಡದಲ್ಲೂ ಅವರು ದರ್ಶನ್ ಅಭಿನಯದ 'ಗಜ' ಚಿತ್ರದಲ್ಲಿ ಪ್ರಬಲ ಖಳನಾಯಕನಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಚಿತ್ರರಂಗಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಳಿಸಲಾಗದ ಛಾಪು ಮೂಡಿಸಿರುವ ಪ್ರದೀಪ್ ರಾವತ್ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

Edited By :
PublicNext

PublicNext

04/08/2026 11:06 pm

Cinque Terre

25.44 K

Cinque Terre

5

ಸಂಬಂಧಿತ ಸುದ್ದಿ