ತಿರುಮಲ: ಟೀಂ ಇಂಡಿಯಾದ ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಭಾನುವಾರ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಅವರೊಂದಿಗೆ ಆಗಮಿಸಿ, ಭಗವಾನ್ ವೆಂಕಟೇಶ್ವರನಿಗೆ ಮುಡಿ (ಕೂದಲು) ಅರ್ಪಿಸಿ ಆಶೀರ್ವಾದ ಪಡೆದರು.
ಸಾಂಪ್ರದಾಯಿಕ ಬಿಳಿ ಉಡುಪಿನಲ್ಲಿ ಮಿಂಚಿದ ಈ ಜೋಡಿ, ದೇವಾಲಯದ ಆವರಣದಲ್ಲಿ ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ಭಕ್ತರು ಹರಕೆ, ಶ್ರದ್ಧೆ ಮತ್ತು ಕೃತಜ್ಞತೆಯ ಸಂಕೇತವಾಗಿ ತಿರುಪತಿ ತಿಮ್ಮಪ್ಪನಿಗೆ ಮುಡಿ ಅರ್ಪಿಸುವುದು ವಾಡಿಕೆ. ಆದಾಗ್ಯೂ, ತಾವು ಇದ್ದಕ್ಕಿದ್ದಂತೆ ಮುಡಿ ಅರ್ಪಿಸಲು ಕಾರಣವೇನು ಎಂಬುದನ್ನು ಹಾರ್ದಿಕ್ ಎಲ್ಲೂ ಬಹಿರಂಗಪಡಿಸಿಲ್ಲ, ಆದರೆ ಅವರ ಈ ಭೇಟಿ ನೆಟಿಜನ್‌ಗಳ ನಡುವೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಪ್ರಸ್ತುತ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ, ಭಾರತ ತಂಡಕ್ಕೆ ಮರಳುವ ಪ್ರಕ್ರಿಯೆಯಲ್ಲಿದ್ದಾರೆ. ತಮ್ಮ ವೃತ್ತಿಜೀವನದ ಈ ಅತ್ಯಂತ ಪ್ರಮುಖ ಹಂತದಲ್ಲಿ ಅವರು ತಿರುಮಲಕ್ಕೆ ಭೇಟಿ ನೀಡಿ ಮುಡಿ ಅರ್ಪಿಸಿರುವುದು ವಿಶೇಷ ಗಮನ ಸೆಳೆದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ನಂತರ ಗಾಯಕ್ಕೆ ತುತ್ತಾಗಿದ್ದ ಹಾರ್ದಿಕ್, ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಅದಾದ ಬಳಿಕ ಅವರು ಅಫ್ಘಾನಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿ, ಇಂಗ್ಲೆಂಡ್ ಪ್ರವಾಸದ ಏಕದಿನ ಹಾಗೂ ಟಿ20 ಸರಣಿಗಳು ಮತ್ತು ಜಿಂಬಾಬ್ವೆ ಸರಣಿಗಳಿಂದಲೂ ಗಾಯದ ಕಾರಣದಿಂದ ಹೊರಗುಳಿದಿದ್ದರು.
PublicNext
04/08/2026 02:23 pm