ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ, ಬಾಳುಗೋಡು, ಪೆರಂಬಾಡಿ ಮುಖ್ಯ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ಆರ್ಜಿ ಮತ್ತು ಬಿಟ್ಟಂಗಾಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಒಳಪಡುತ್ತದೆ. ಇದು ಕೇರಳ ರಾಜ್ಯದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಮುಖ ಅಂತರರಾಜ್ಯ ರಸ್ತೆಯಾಗಿದೆ. ಕಳೆದ ಹದಿನೈದು ವರ್ಷಗಳಿಂದ ಉತ್ತಮ ರೀತಿಯಲ್ಲಿದ್ದ ಈ ರಸ್ತೆಯು ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ಹಾಳಾಗಿದೆ. ಅಲ್ಲದೆ ಕಳೆದ ಮೂರು ತಿಂಗಳ ಹಿಂದೆ ಕಡಕೋಲ್ಲಿ ಬಳಿ ನಿರ್ಮಿಸಲಾದ ಸೇತುವೆಯು ಅತ್ಯಂತ ಕಳಪೆಯಾಗಿದ್ದು, ಅದರ ಕಬ್ಬಿಣದ ರಾಡುಗಳು ಹೊರಗೆ ಎದ್ದು ಕಾಣುತ್ತಿವೆ. ಕಾಮಗಾರಿಯ ಗುತ್ತಿಗೆ ಪಡೆದವರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಬಿಲ್ ತಡೆಹಿಡಿಯಬೇಕು ಹಾಗೂ ಶಾಸಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಬಿಡಿಭಾಗಗಳು ಉದುರಿ ಬೀಳುತ್ತಿವೆ. ರಸ್ತೆಯ ಎರಡೂ ಬದಿಗಳ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ನೀರು ಮುಖ್ಯ ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು, ಗುಂಡಿಗಳು ಕಾಣದೆ ಅನೇಕ ಅಪಘಾತಗಳು ಸಂಭವಿಸಿವೆ. ಇತ್ತೀಚೆಗೆ ದ್ವಿಚಕ್ರ ಸವಾರನೋರ್ವ ಮೃತಪಟ್ಟ ಘಟನೆಯೂ ನಡೆದಿದೆ. ಆದ್ದರಿಂದ ಸಂಪೂರ್ಣ ಹೊಂಡ-ಗುಂಡಿಗಳಿಂದ ಕೂಡಿರುವ ಈ ರಸ್ತೆಯ ಗುಂಡಿಗಳನ್ನು ಅಧಿಕಾರಿಗಳು ತಕ್ಷಣವೇ ಮುಚ್ಚಬೇಕು. ಮುಂದಿನ 20 ದಿನಗಳ ಒಳಗೆ ಗುಂಡಿಗಳನ್ನು ಮುಚ್ಚದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Kshetra Samachara
30/07/2026 07:14 am
LOADING...