ಮಡಿಕೇರಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಮಡಿಕೇರಿಯಲ್ಲಿ ಶಾಸಕ ಮಂಥರ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. "ರಾಜ್ಯದ ರೈತರ ಹಿತಾಸಕ್ತಿ, ಕುಡಿಯುವ ನೀರಿನ ಅಗತ್ಯ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಬೇಡಿಕೆಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಹಾರಂಗಿ ಜಲಾಶಯಕ್ಕೆ ಉತ್ತಮ ಪ್ರಮಾಣದಲ್ಲಿ ನೀರಿನ ಒಳಹರಿವು ಬರುತ್ತಿದ್ದು, ಜಲಾಶಯ ಬಹುತೇಕ ಗರಿಷ್ಠ ಮಟ್ಟ ತಲುಪಿದೆ. ಒಳಹರಿವು ಹೆಚ್ಚಿರುವ ಕಾರಣ ಸುರಕ್ಷತಾ ದೃಷ್ಟಿಯಿಂದ ನೀರನ್ನು ಹೊರಹರಿಸಲಾಗುತ್ತಿದ್ದು, ಜಲಾಶಯದ ಅಧಿಕಾರಿಗಳು ನೀರಿನ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಕಾವೇರಿ ನದಿಯ ಕೆಳಭಾಗದ ಜಲಾನಯನ ಪ್ರದೇಶಗಳಲ್ಲಿ ಇನ್ನಷ್ಟು ಮಳೆಯ ಅಗತ್ಯವಿದ್ದು, ರಾಜ್ಯದಲ್ಲಿ ಮಳೆ ಕೊರತೆ ಇರುವ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಕುರಿತು ಸರ್ಕಾರ ಚರ್ಚೆ ನಡೆಸುತ್ತಿದೆ" ಎಂದು ಹೇಳಿದರು.
ಜೊತೆಗೆ, "ಕರ್ನಾಟಕದ ರೈತರ ಹಿತಾಸಕ್ತಿ ಹಾಗೂ ಭವಿಷ್ಯದ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಹಾರಂಗಿ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಒದಗಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ನೀರಿನ ಪೂರೈಕೆಗೆ ಮುಖ್ಯಮಂತ್ರಿ ವಿಶೇಷ ಗಮನ ಹರಿಸಬೇಕು" ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಕೆಆರ್‌ಎಸ್ ಜಲಾಶಯವೂ ಭರ್ತಿಯಾಗುವ ವಿಶ್ವಾಸ ವ್ಯಕ್ತಪಡಿಸಿದ ಅವರು, "ಕಾವೇರಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ಹಾಗೂ ನ್ಯಾಯಮಂಡಳಿಯ ಆದೇಶಗಳಿಗೆ ಗೌರವವಿದೆ" ಎಂದು ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ ತಿಳಿಸಿದ್ದಾರೆ.
PublicNext
01/08/2026 07:06 am
LOADING...