ಕೊಡಗು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವತಿಯಿಂದ ವಿರಾಜಪೇಟೆ ತಾಲೂಕಿನ ಕಾನೂರು ವಲಯದ ಕುಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮ ಜರುಗಿತು.
ಶಾಲೆಯ ಮುಖ್ಯ ಶಿಕ್ಷಕ ದಿನೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೈದ್ಯ ಡಾ. ಕಾರ್ಯಪ್ಪ ಮಾತನಾಡಿ, "ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಲವು ಜನಮಂಗಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯಕರ ಹಾಗೂ ಉತ್ತಮ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಪ್ರತಿವರ್ಷ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ" ಎಂದು ತಿಳಿಸಿದರು.
"ಇತ್ತೀಚಿನ ದಿನಗಳಲ್ಲಿ ಕುತೂಹಲದಿಂದಲೇ ಅನೇಕ ಮಕ್ಕಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ದುಶ್ಚಟಗಳು ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗಳಿಗೆ ಕಾರಣವಾಗುವುದರ ಜೊತೆಗೆ ಜೀವನವನ್ನೇ ಕತ್ತಲೆಯತ್ತ ತಳ್ಳುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು" ಎಂದು ಅವರು ಕರೆ ನೀಡಿದರು.
ಮುಖ್ಯ ಶಿಕ್ಷಕ ದಿನೇಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಬಳಿಕ ವಲಯದ ಮೇಲ್ವಿಚಾರಕ ಪ್ರತಾಪ್ ದೇವಾಡಿಗ ಅವರು ವಿದ್ಯಾರ್ಥಿಗಳಿಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪೂಜೆಕಲ್ಲು ಒಕ್ಕೂಟದ ಅಧ್ಯಕ್ಷ ರಾಜೇಶ್, ಮಾಜಿ ಅಧ್ಯಕ್ಷೆ ಲೀಲಾ ಪ್ರಭು, ಸೇವಾ ಪ್ರತಿನಿಧಿ ಹೇಮಾವತಿ, ಶಾಲೆಯ ಶಿಕ್ಷಕ ವೃಂದ ಹಾಗೂ 85 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
01/08/2026 08:17 pm
LOADING...