ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ್ ಕ್ರಾಸ್ ಬಳಿ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎರಡು ಬಸ್‌ಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಮನಾಬಾದ್ ಕಡೆಯಿಂದ ಕಲಬುರಗಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ಗೆ, ಕಲಬುರಗಿಯಿಂದ ಹುಮನಾಬಾದ್ ಕಡೆಗೆ ತೆರಳುತ್ತಿದ್ದ ಬೀದರ್–ದಾವಣಗೆರೆ ಸ್ಲೀಪರ್ ಬಸ್ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.
ಮೃತರನ್ನು ಬೀದರ್–ಕಲಬುರಗಿ ಎಕ್ಸ್‌ಪ್ರೆಸ್ ಬಸ್ ಚಾಲಕ, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಹುಲ್ಯಾಳ ಗ್ರಾಮದ ತುಕಾರಾಮ ಏಕನಾಥರಾವ ಬಿರಾದಾರ ಹಾಗೂ ಬೀದರ್–ದಾವಣಗೆರೆ ಸ್ಲೀಪರ್ ಬಸ್ ಚಾಲಕ, ಹುಮನಾಬಾದ್ ತಾಲ್ಲೂಕಿನ ಸೆಡೋಳ ಗ್ರಾಮದ ಶಿವಾನಂದ ರೆಡ್ಡಿ ಎಂದು ಗುರುತಿಸಲಾಗಿದೆ. ತುಕಾರಾಮ ಅವರು ಸ್ಥಳದಲ್ಲೇ ಮೃತಪಟ್ಟರೆ, ಶಿವಾನಂದ ರೆಡ್ಡಿ ಅವರನ್ನು ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇಂದ್ರಕ್ಕೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟರು.
ಎದುರಿಗೆ ಬರುತ್ತಿದ್ದ ಲಾರಿಯನ್ನು ಓವರ್‌ಟೇಕ್ ಮಾಡುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಲಾರಿ ಕಂದಕಕ್ಕೆ ಉರುಳಿ ಬಿದ್ದರೂ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡೂ ಬಸ್‌ಗಳಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಡಿಐಜಿ ಶಾಂತನು ಸಿನ್ಹಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
PublicNext
02/08/2026 08:59 am