ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಬಿದಿರು ನೆಡುವ ಕಾರ್ಯಕ್ಕೆ ಮುಂದಾದ ಅರಣ್ಯ ಇಲಾಖೆ, ಸ್ಥಳೀಯರ ಆಕ್ರೋಶ

ಸೋಮವಾರಪೇಟೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ಹೊನ್ನೇರು ಬೈಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಹಿಟಾಚಿ ಯಂತ್ರದ ಮೂಲಕ ಗುಂಡಿ ತೆಗೆಸಿ ಬಿದಿರು ನೆಡುವ ಕಾರ್ಯಕ್ಕೆ ಮುಂದಾದ ವೇಳೆ ಗ್ರಾಮಸ್ಥರು ಅದನ್ನು ತಡೆದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಗ್ರಾಮಸ್ಥರಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ, ಹೊನ್ನೇರು ಬೈಲು ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹೇಳಿ ಗುಂಡಿ ತೆಗೆದು ಬಿದಿರು ನೆಡುವ ಕಾರ್ಯ ಆರಂಭಿಸಲಾಗಿತ್ತು.

ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಮೇಲಧಿಕಾರಿ ತಕ್ಷಣವೇ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಅರಣ್ಯಾಧಿಕಾರಿ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಮಲ್ಲೇಶ್, ಉಪ ವಲಯ ಅರಣ್ಯಾಧಿಕಾರಿ ಕಿರಣ್ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತನಾಡಿದ ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ. ಸುರೇಶ್, ಸ್ಥಳೀಯ ರೈತರನ್ನು ಒಕ್ಕಲೆಬ್ಬಿಸುವ ರೀತಿಯಲ್ಲಿ ಅರಣ್ಯ ಇಲಾಖೆ ನಡೆದುಕೊಳ್ಳುತ್ತಿದೆ.

ಕೂತಿ ಗ್ರಾಮದಲ್ಲಿ ಸೆಕ್ಷನ್-4 ಅನ್ನೋದೇ ಇಲ್ಲ. ಇದ್ದಿದ್ದರೆ ಗ್ರಾಮಸ್ಥರಿಗೆ ನೋಟಿಸ್ ನೀಡಬೇಕಿತ್ತು. ಸರ್ಕಾರ ಸಮಯ ಕೇಳಿರುವವರೆಗೆ ಅರಣ್ಯ ಇಲಾಖೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಮೊದಲು ಜಂಟಿ ಸರ್ವೇ ನಡೆಸಿ, ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಈಗಾಗಲೇ ನಮೂನೆ 50 ಮತ್ತು 53ನೇ ಕಲಂಗಳಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು. ಅದನ್ನು ಪರಿಶೀಲಿಸಬೇಕು. ನಂತರ ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರಬೇಕು ಎಂದರು.

ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಗ್ರಾಮಸ್ಥರು ಹಾಗೂ ಗ್ರಾಮ ಸಮಿತಿಗೆ ಯಾವುದೇ ಮಾಹಿತಿ ನೀಡದೇ ಹಿಟಾಚಿ ಯಂತ್ರದ ಮೂಲಕ ಗುಂಡಿ ತೆಗೆದು ಗಿಡ ನೆಡುವ ಕೆಲಸ ನಡೆಸಲಾಗಿದೆ. ಆದೇಶದ ಪ್ರತಿಯನ್ನು ಕೇಳಿದರೂ ಅಧಿಕಾರಿಗಳು ನೀಡಿಲ್ಲ. ಕಾಡುಪ್ರಾಣಿಗಳ ಸಮಸ್ಯೆ ಎದುರಾದಾಗ ಸ್ಪಂದಿಸದ ಅರಣ್ಯ ಇಲಾಖೆ, ಈಗ ಏಕಾಏಕಿ ಈ ರೀತಿಯ ಕ್ರಮ ಕೈಗೊಂಡಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅರಣ್ಯಾಧಿಕಾರಿ ಅಭಿಷೇಕ್, ಜಂಟಿ ಸರ್ವೇ ನಡೆಸಲಾಗುವುದು, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂಬ ಭರವಸೆ ನೀಡಿದ ಬಳಿಕ ಅಧಿಕಾರಿಗಳು ಸ್ಥಳದಿಂದ ತೆರಳಿದರು.

Edited By : Vinayak Patil
PublicNext

PublicNext

02/08/2026 03:04 pm

Cinque Terre

10.35 K

Cinque Terre

0

ಸಂಬಂಧಿತ ಸುದ್ದಿ