ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ : ಹಣ ನೀಡಿದರೆ ಕೆಲವೇ ದಿನಗಳಲ್ಲಿ ಸರ್ಟಿಫಿಕೇಟ್ ಸಿದ್ಧ? ಹೊರಗುತ್ತಿಗೆ ನೌಕರನ ವಿರುದ್ಧ ಗಂಭೀರ ಆರೋಪ

ಬಾಗೇಪಲ್ಲಿ: ಸರ್ಕಾರಿ ಕಚೇರಿಗಳಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪರದಾಡುತ್ತಿರುವ ನಡುವೆಯೇ, ಹಣ ನೀಡಿದರೆ ಪ್ರಮಾಣಪತ್ರಗಳನ್ನು ತ್ವರಿತವಾಗಿ ಸಿದ್ಧಪಡಿಸಿಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಬಾಗೇಪಲ್ಲಿ ಪಟ್ಟಣದಲ್ಲಿ ಕೇಳಿಬಂದಿದೆ.

ಒಂದು ಮರಣ ಪ್ರಮಾಣಪತ್ರಕ್ಕೆ ₹5 ಸಾವಿರದಿಂದ ₹20 ಸಾವಿರದವರೆಗೆ ಹಣ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನ ಗುಂಡ್ಲಪಲ್ಲಿ ಗ್ರಾಮದ ಬುಡ್ಡಪ್ಪ ಎಂಬುವವರು 2007ರಲ್ಲಿ ಮೃತಪಟ್ಟಿದ್ದರು ಎನ್ನಲಾಗಿದ್ದು, ಕುಟುಂಬಸ್ಥರು ಮರಣ ಪ್ರಮಾಣಪತ್ರ ಪಡೆಯಲು ಹಲವು ಬಾರಿ ಪ್ರಯತ್ನಿಸಿದರೂ ಪ್ರಮಾಣಪತ್ರ ದೊರೆಯಲಿಲ್ಲ ಎಂಬ ಆರೋಪವಿದೆ. ಬಳಿಕ ವಿಶ್ವನಾಥ್ ಎಂಬ ವ್ಯಕ್ತಿಯ ಮೂಲಕ ಹಣ ನೀಡಿ ವ್ಯವಹಾರ ಕುದುರಿಸಿದ ನಂತರ ಕೆಲವೇ ದಿನಗಳಲ್ಲಿ ಮರಣ ಪ್ರಮಾಣಪತ್ರ ಸಿದ್ಧವಾಯಿತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಇದಲ್ಲದೆ, 2011ರಲ್ಲೇ ಮರಣ ಪ್ರಮಾಣಪತ್ರ ನೀಡಲಾಗಿತ್ತು ಎಂಬಂತೆ ದಾಖಲೆ ಸಿದ್ಧಪಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಮರಣ ಪ್ರಮಾಣಪತ್ರವನ್ನು ಬಾಗೇಪಲ್ಲಿ ಪುರಸಭೆಯಲ್ಲಿ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ಬಾಗೇಪಲ್ಲಿ ತಾಲ್ಲೂಕು ಕಚೇರಿಯ ಜನನ ಪ್ರಮಾಣಪತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರ ವಿಶ್ವನಾಥ್ ಅವರು ಪುರಸಭೆಯಿಂದ ಮರಣ ಪ್ರಮಾಣಪತ್ರಗಳನ್ನು ತಂದುಕೊಡುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಮಾಣಪತ್ರ ಮಾಡಿಕೊಡುವ ವಿಚಾರದಲ್ಲಿ ಹಣವನ್ನು ಕಂತುಗಳ ರೂಪದಲ್ಲಿ ಪಡೆಯಲಾಗುತ್ತಿದೆ ಎಂಬ ಆರೋಪವೂ ಇದೆ.

ಈ ಹಿನ್ನೆಲೆಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳ ವಿತರಣಾ ಪ್ರಕ್ರಿಯೆ, ಸಂಬಂಧಿಸಿದ ದಾಖಲೆಗಳು ಹಾಗೂ ಹಣದ ವ್ಯವಹಾರಗಳ ಬಗ್ಗೆ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಚಿಕ್ಕತೇಕಹಳ್ಳಿ ಡಿ ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ

Edited By :
PublicNext

PublicNext

11/09/2026 04:49 pm

Cinque Terre

5.04 K

Cinque Terre

0

ಸಂಬಂಧಿತ ಸುದ್ದಿ