ತುಮಕೂರು : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ 9ನೇ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ವಿವಿಧ ಸಂಘ-ಸಂಸ್ಥೆಗಳು ಪ್ರತಿಷ್ಠಾಪಿಸಿರುವ ಗಣಪತಿಗಳನ್ನು ಒಗ್ಗೂಡಿಸಿ ಈ ಬಾರಿ ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ಜಿ. ಪ್ರದೀಪ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 14ರಂದು ಭದ್ರಮ್ಮ ವೃತ್ತದ ಬಳಿಯ ಸೋಮೆಕಟ್ಟೆ ಮಠದ ಆವರಣದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 13ರಂದು ಮಧ್ಯಾಹ್ನ 12.30ಕ್ಕೆ ಕ್ಯಾತ್ಸಂದ್ರದ ಜಾಸ್ ಟೋಲ್‌ಗೇಟ್‌ನಿಂದ ಬೈಕ್ ರ‍್ಯಾಲಿ ಮೂಲಕ ಗಣಪತಿಯ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ ಎಂದರು.
ಅಶೋಕ್ ಸಿಂಘಾಲ್ ಅವರ ಜನ್ಮಶತಾಬ್ದಿ ಸ್ಮರಣಾರ್ಥ ಮುಖ್ಯ ಮಂಟಪಕ್ಕೆ ‘ಅಶೋಕ್ ಸಿಂಘಾಲ್ ಜೀ ಮಂಟಪ’, ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಅಂಗವಾಗಿ ವೇದಿಕೆಗೆ ‘ವಂದೇ ಮಾತರಂ ವೇದಿಕೆ’ ಹಾಗೂ ಪ್ರಸಾದ ಮಂಟಪಕ್ಕೆ ‘ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಪ್ರಸಾದ ಮಂಟಪ’ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ 14ರಿಂದ 13 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 26ರಂದು ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವ ನಡೆಯಲಿದ್ದು, ನಗರದ 25ರಿಂದ 30 ಗಣಪತಿ ಮಂಡಳಿಗಳು ಈಗಾಗಲೇ ಒಪ್ಪಿಗೆ ಸೂಚಿಸಿವೆ. ಇನ್ನಷ್ಟು ಸಂಘಗಳು ಭಾಗವಹಿಸುವ ಸಾಧ್ಯತೆ ಇದೆ ಎಂದರು.
ಒಂದು ಅಥವಾ ಮೂರು ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸುವ ಸಂಘಗಳು ತಮ್ಮ ಆಚರಣೆ ಪೂರ್ಣಗೊಳಿಸಿದ ಬಳಿಕ ವಿಸರ್ಜನೆ ಮಾಡದೆ, ಪ್ರತ್ಯೇಕವಾಗಿ ನಿರ್ಮಿಸಿರುವ ಮಂಟಪದಲ್ಲಿ ಗಣಪತಿ ಮೂರ್ತಿಗಳನ್ನು ಇರಿಸಬಹುದು. ಅಲ್ಲಿ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಲಾಗುವುದು. ಬಳಿಕ ಸೆಪ್ಟೆಂಬರ್ 26ರಂದು ಎಲ್ಲ ಗಣಪತಿ ಮಂಡಳಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಕೆ.ಎನ್.ಎಸ್. ಕಲ್ಯಾಣಿಯಲ್ಲಿ ಸಾಮೂಹಿಕ ವಿಸರ್ಜನೆ ನಡೆಸಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ 11 ಗಂಟೆಯಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಂದಿಧ್ವಜ, ವೀರಗಾಸೆ, ನಾಸಿಕ್ ಡೋಲು ಹಾಗೂ ಡಿಜೆ ಸೆಟ್‌ಗಳೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮೀಕಾಂತ್ ಮಾತನಾಡಿ, ಈ ಬಾರಿಯ ಹಿಂದೂ ಮಹಾ ಗಣಪತಿ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತಿದ್ದು, ಎಲ್ಲರೂ ಸಂಭ್ರಮದಿಂದ ಗಣೇಶೋತ್ಸವ ಆಚರಿಸುವುದರ ಜೊತೆಗೆ ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
PublicNext
11/09/2026 05:37 pm