ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಗಣೇಶೋತ್ಸವ ಶಾಂತಿ ಸಭೆಯ ಬ್ಯಾನರ್‌ನಲ್ಲೇ ಕನ್ನಡದ ಕಗ್ಗೊಲೆ!

ಯಾದಗಿರಿ: ಗಣೇಶೋತ್ಸವ ಶಾಂತಿ ಸಭೆ ಆಯೋಜಿಸಿ, ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕಿದ್ದ ಪೊಲೀಸ್ ಇಲಾಖೆ ಇದೀಗ ತನ್ನದೇ ಬ್ಯಾನರ್‌ನಿಂದ ಮುಜುಗರಕ್ಕೆ ಒಳಗಾಗಿದೆ.

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಶಹಾಪುರ ಗ್ರಾಮೀಣ ಸಿಪಿಐ ದೀಪಕ್ ಬೋಸ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಆದರೆ, ಸಭೆಗೆ ಅಳವಡಿಸಿದ್ದ ಬ್ಯಾನರ್‌ನಲ್ಲೇ ಕನ್ನಡ ಭಾಷೆಯ ಬರವಣಿಗೆಯಲ್ಲಿ ಹಲವು ತಪ್ಪುಗಳು ಕಂಡುಬಂದಿರುವ ಆರೋಪ ಕೇಳಿಬಂದಿದೆ.

ಇಷ್ಟೇ ಅಲ್ಲ, ಪೊಲೀಸ್ ಠಾಣೆ ಎಂಬುದನ್ನೇ ತಪ್ಪಾಗಿ ಬರೆದು, ಇಲಾಖೆಯ ಹೆಮ್ಮೆಯನ್ನು ಸೂಚಿಸುವ ಪೊಲೀಸ್ ಸಿಂಬಲ್‌ನಲ್ಲೂ ಕನ್ನಡದ ಬದಲಿಗೆ ತಮಿಳು ಅಕ್ಷರಗಳು ಕಾಣಿಸಿಕೊಂಡಿರುವುದು ಸಾರ್ವಜನಿಕರ ಅಸಮಾಧಾನ ತರಿಸಿದೆ.

ಪೊಲೀಸ್ ಇಲಾಖೆಯ ಅಧಿಕೃತ ಕಾರ್ಯಕ್ರಮದ ಬ್ಯಾನರ್‌ನಲ್ಲೇ ಇಂತಹ ತಪ್ಪು ಕಂಡು ಬಂದಿರುವುದು ಸ್ಥಳೀಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಸಭೆಗೆ ಆಗಮಿಸಿದ್ದ ಕೆಲ ಗಣೇಶೋತ್ಸವ ಮಂಡಳಿಗಳ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣೇಶೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಶಾಂತಿ, ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಬೇಕಿದ್ದ ಇಲಾಖೆ, ತನ್ನದೇ ಕಾರ್ಯಕ್ರಮದ ಬ್ಯಾನರ್ ಅನ್ನು ಪರಿಶೀಲಿಸದೆ ಅಳವಡಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬ್ಯಾನರ್‌ನಲ್ಲಿನ ತಪ್ಪುಗಳಿಂದ ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳಲ್ಲಿ ಗೊಂದಲ ಉಂಟಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಹಾಗಾದರೆ ಪೊಲೀಸ್ ಇಲಾಖೆಯ ಅಧಿಕೃತ ಕಾರ್ಯಕ್ರಮದ ಬ್ಯಾನರ್ ಸಿದ್ಧಪಡಿಸಿದ್ದು ಯಾರು?

ಬ್ಯಾನರ್ ಮುದ್ರಣಕ್ಕೂ ಮುನ್ನ ಅದನ್ನು ಪರಿಶೀಲಿಸಿದ್ದು ಯಾರು? ಇಂತಹ ತಪ್ಪುಗಳು ಮೇಲಧಿಕಾರಿಗಳ ಗಮನಕ್ಕೆ ಬರಲಿಲ್ಲವೇ?

ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಪೊಲೀಸ್ ಇಲಾಖೆಯ ಕಾರ್ಯಕ್ರಮದಲ್ಲೇ ಇಂತಹ ಪ್ರಮಾದವಾಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

Edited By :
PublicNext

PublicNext

13/09/2026 10:14 am

Cinque Terre

10.11 K

Cinque Terre

0

ಸಂಬಂಧಿತ ಸುದ್ದಿ