ಮಡಿಕೇರಿ : ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಸ್ಮರಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ ವನ್ನು ಸೆ.17ರಿಂದ ಅ.17ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಅವಧಿಯಲ್ಲಿ ವಿವಿಧ ಸಾಮಾಜಿಕ ಹಾಗೂ ಜನಪರ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಪಕ್ಷದ ಕಾರ್ಯಕರ್ತರು, ವಿವಿಧ ಮೋರ್ಚಾಗಳು ಹಾಗೂ ಘಟಕಗಳ ಸಹಯೋಗದಲ್ಲಿ ಸೇವಾ ಕಾರ್ಯಕ್ರಮಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಡೆಸಲಾಗುವುದು ಎಂದರು.
ನರೇಂದ್ರ ಮೋದಿ ಅವರು ಗುಜರಾತ್ ನ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ 25 ವರ್ಷಗಳ ಕಾಲ ಭ್ರಷ್ಟಾಚಾರ ಮುಕ್ತವಾದ ಮಾದರಿ ಆಡಳಿತವನ್ನು ನೀಡಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತದ ಗೌರವವನ್ನು ಎತ್ತಿ ಹಿಡಿದ ಮೋದಿ ಅವರ ಜನಪರ ಕಾಳಜಿಯ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಅಭಿಯಾನವನ್ನು ನಡೆಸಲಾಗುತ್ತಿದೆ. ಆ ಮೂಲಕ “2047 ರ ವಿಕಸಿತ ಭಾರತ” ಸಂಕಲ್ಪಕ್ಕೆ ಶಕ್ತಿ ತುಂಬಲಾಗುವುದು.
ಅಭಿಯಾನದ ಮೊದಲ ದಿನವಾದ ಸೆ.17 ರಂದು “ಆಶೀರ್ವಾದ ದೀಪ” ಕಾರ್ಯಕ್ರಮದಡಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಜಿಲ್ಲೆಯ ಪ್ರತಿಯೊಬ್ಬ ನಿವಾಸಿಯ ಮನೆಯಲ್ಲೂ ಸಂಜೆ ವೇಳೆ ನರೇಂದ್ರ ಮೋದಿ ಅವರ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ದೀಪ ಬೆಳಗಲು ಕರೆ ನೀಡುವುದಾಗಿ ತಿಳಿಸಿದರು.
ಅಭಿಯಾನದ ಅಂಗವಾಗಿ ಪ್ರತಿದಿನ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಡೆಯಲಿವೆ. ಅಗತ್ಯವಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ನಡೆಸಲಾಗುವುದು. ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಗತ್ಯ ಸಹಾಯ ಒದಗಿಸಲಾಗುವುದು. ಪರಿಸರ ಸಂರಕ್ಷಣೆಗಾಗಿ ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳು, ರಸ್ತೆ, ಶಾಲೆ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುವುದು.
ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಮೂಡಿಸಲಾಗುವುದು. ‘ಒಂದು ಗ್ರಾಮ ದತ್ತು’ ಸೇವಾ ಕಾರ್ಯಕ್ರಮದಡಿ ಗ್ರಾಮಗಳ ಅಗತ್ಯಗಳನ್ನು ಗುರುತಿಸಿ ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಯೋಗ ಮತ್ತು ಧ್ಯಾನ, ಆರೋಗ್ಯಕರ ಜೀವನಶೈಲಿ ಹಾಗೂ ಮಾನಸಿಕ ಕ್ಷೇಮದ ಕುರಿತು ಜಾಗೃತಿ ಮೂಡಿಸಲಾಗುವುದು. ಪ್ಲಾಸ್ಟಿಕ್ ಮುಕ್ತ ಜಾಗೃತಿಯಡಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಮಹಿಳೆಯರ ಆರೋಗ್ಯ, ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸಲಾಗುವುದು.
ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪುಸ್ತಕ, ಕಲಿಕಾ ಸಾಮಾಗ್ರಿ, ಶೈಕ್ಷಣಿಕ ನೆರವು ಯುವಜನರಿಗೆ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾರ್ಗದರ್ಶನ ನೀಡಲಾಗುವುದು. ಹಿರಿಯರಿಗೆ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮದಡಿ ಮೊಬೈಲ್, ಡಿಜಿಟಲ್ ಸೇವೆಗಳು ಹಾಗೂ ಆನ್‌ಲೈನ್ ಸೌಲಭ್ಯಗಳ ಸುರಕ್ಷಿತ ಬಳಕೆಯ ಕುರಿತು ತರಬೇತಿ ನೀಡಲಾಗುವುದು ಎಂದರು
Kshetra Samachara
17/09/2026 07:07 am