ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ : ಲಾಡ್ಜ್‌ನಲ್ಲಿ ಪತ್ನಿಯನ್ನು ಕೊಂದು ಪತಿ ಪರಾರಿ…! 4 ವರ್ಷಗಳ ಪ್ರೇಮ ವಿವಾಹ ಕೌಟುಂಬಿಕ ಕಲಹಕ್ಕೆ ಅಂತ್ಯ

ಗೌರಿಬಿದನೂರು: ದೊಡ್ಡಬಳ್ಳಾಪುರ ನಗರದ SGS ಲಾಡ್ಜ್‌ನಲ್ಲಿ ಪತ್ನಿಯನ್ನು ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಗ್ರಾಮದ ವಿದ್ಯಾ (23) ಕೊಲೆಯಾದವರು ಎಂದು ಗುರುತಿಸಲಾಗಿದೆ. ಅವರ ಪತಿ ಆನಂದ್‌ ಕೊಲೆ ಆರೋಪಿಯಾಗಿದ್ದು, ಘಟನೆ ಬಳಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಸಮೃದ್ಧಿ ಹೋಟೆಲ್‌ ಪಕ್ಕದಲ್ಲಿರುವ SGS ಲಾಡ್ಜ್‌ಗೆ ಸೆ.15ರ ರಾತ್ರಿ ಸುಮಾರು 11.48ರ ವೇಳೆಗೆ ವಿದ್ಯಾ ಹಾಗೂ ಆನಂದ್‌ ಆಗಮಿಸಿದ್ದಾರೆ. ಲಾಡ್ಜ್‌ನ ಸಿಸಿಟಿವಿ ದೃಶ್ಯದಲ್ಲಿ ಇಬ್ಬರೂ ನಗುಮುಖದಿಂದ ಕೈಯಲ್ಲಿ ಊಟದ ಪಾರ್ಸಲ್ ಹಿಡಿದುಕೊಂಡು ಕೊಠಡಿಗೆ ತೆರಳಿರುವುದು ಕಂಡುಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಆನಂದ್‌ ಕೊಠಡಿಯಿಂದ ಹೊರಬಂದು, ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿಕೊಂಡು ಕೀಲಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಕೊಠಡಿಯಲ್ಲಿ ಲಗೇಜ್ ಇರಬಹುದೆಂದು ಲಾಡ್ಜ್ ಸಿಬ್ಬಂದಿ ಆರಂಭದಲ್ಲಿ ಅನುಮಾನಿಸಿರಲಿಲ್ಲ.

24 ಗಂಟೆಗಳ ಅವಧಿ ಮುಗಿದ ಬಳಿಕ ಲಾಡ್ಜ್ ಸಿಬ್ಬಂದಿ ಕೊಠಡಿಯಲ್ಲಿದ್ದವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು. ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಕೊಠಡಿ ಪರಿಶೀಲಿಸಿದಾಗ ವಿದ್ಯಾ ಮೃತಪಟ್ಟಿರುವುದು ಪತ್ತೆಯಾಗಿದೆ.

ವಿದ್ಯಾಳನ್ನು ಐಡಿ ಕಾರ್ಡ್ ಟ್ಯಾಗ್‌ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಾವಿನ ನಿಖರ ವಿಧಾನ ಹಾಗೂ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿದ್ಯಾ ಹಾಗೂ ಆನಂದ್‌ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದೊಡ್ಡಬಳ್ಳಾಪುರ ನಗರದ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿ ನಡುವೆ ಕಳೆದ ಆರು ತಿಂಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದಾಗಿ ವಿದ್ಯಾ ಸುಮಾರು ಎರಡು ತಿಂಗಳ ಹಿಂದೆ ಪತಿಯಿಂದ ದೂರವಾಗಿ ಬೆಂಗಳೂರಿನಲ್ಲಿ ಪಿಜಿಗೆ ಸೇರಿದ್ದರು.

ವಿದ್ಯಾ ಕಾಣೆಯಾಗಿರುವ ಬಗ್ಗೆ ಈ ಹಿಂದೆ ಆನಂದ್‌ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ಎನ್ನಲಾಗಿದೆ. ಸುಮಾರು 20 ದಿನಗಳ ಹಿಂದೆ ಪೊಲೀಸರು ವಿದ್ಯಾಳನ್ನು ಕರೆಸಿ ವಿಚಾರಿಸಿ, ಬುದ್ಧಿವಾದ ಹೇಳಿ ಮತ್ತೆ ಪತಿಯೊಂದಿಗೆ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಆನಂದ್‌ ರಾಜಾನುಕುಂಟೆ ಮೂಲದ ಖಾಸಗಿ ಫೈನಾನ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ವಿದ್ಯಾ ಪಾಸ್ಕಾನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆ ಬಳಿಕ ಆನಂದ್‌ ವಿದ್ಯಾಳ ಮೊಬೈಲ್‌ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದ ನಿಖರ ಕಾರಣ ಹಾಗೂ ಇತರೆ ವಿವರಗಳು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

ಚಿಕ್ಕತೇಕಹಳ್ಳಿ ಡಿ ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ

Edited By : Vinayak Patil
PublicNext

PublicNext

17/09/2026 07:22 pm

Cinque Terre

6.62 K

Cinque Terre

0