ನಂಜನಗೂಡು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ತೆರಳಿದ್ದ ಯುವಕನೋರ್ವ ಕೆರೆಯಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯ ಹತ್ವಾಳು ಕಟ್ಟೆಯಲ್ಲಿ ನಡೆದಿದೆ.
ಮೃತ ಯುವಕನನ್ನು ನಂಜನಗೂಡು ಪಟ್ಟಣದ ಶ್ರೀರಾಂಪುರ ನಿವಾಸಿಗಳಾದ ಕುಮಾರ್ ಹಾಗೂ ಲಕ್ಷ್ಮಿ ದಂಪತಿಯ ಪುತ್ರ ಮನು (28) ಎಂದು ಗುರುತಿಸಲಾಗಿದೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮನು ಹುಲ್ಲಹಳ್ಳಿಯಲ್ಲಿರುವ ಅಜ್ಜಿ ಮನೆಗೆ ತೆರಳಿದ್ದ. ಬುಧವಾರ ಇಬ್ಬರು ಸ್ನೇಹಿತರೊಂದಿಗೆ ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಹತ್ವಾಳು ಕಟ್ಟೆಯಲ್ಲಿ ಈಜಲು ತೆರಳಿದ್ದಾನೆ. ಈ ವೇಳೆ ನೀರಿಗೆ ಇಳಿದ ಮನು ಕೆರೆಯಲ್ಲಿದ್ದ ಸುಳಿಗೆ ಸಿಲುಕಿದ್ದು, ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮನು ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಆತನೊಂದಿಗೆ ತೆರಳಿದ್ದ ಇನ್ನಿಬ್ಬರು ಯುವಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಸಂಬಂಧಿಕರು ನೀರಿನಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಮನು ನಂಜನಗೂಡು ಪಟ್ಟಣದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಂದೆ-ತಾಯಿ, ಇಬ್ಬರು ಅಕ್ಕಂದಿರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾನೆ. ಹಬ್ಬದ ಸಂಭ್ರಮಕ್ಕಾಗಿ ಊರಿಗೆ ಬಂದಿದ್ದ ಯುವಕ ದುರಂತ ಸಾವಿಗೀಡಾಗಿರುವುದು ಕುಟುಂಬಸ್ಥರು ಹಾಗೂ ಸಂಬಂಧಿಕರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.
ಘಟನೆಯ ಸುದ್ದಿ ತಿಳಿದು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪೂಜಾ ಶ್ರೀ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
18/09/2026 04:19 pm
LOADING...