ಬೆಂಗಳೂರು : ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮೂಲಸೌಕರ್ಯಗಳ ನಿರ್ವಹಣೆ, ಸುಗಮ ಸಂಚಾರ ಹಾಗೂ ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷತೆಯ ವಾಸ್ತವ ಸ್ಥಿತಿಗತಿ ಪರಿಶೀಲಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು, ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ಅವರು, ಪಾಲಿಕೆ ವ್ಯಾಪ್ತಿಯ ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಹೊರ ವರ್ತುಲ ರಸ್ತೆ ಹಾಗೂ ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ನೈಸ್ ರಸ್ತೆ ಜಂಕ್ಷನ್‌ವರೆಗೆ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದರು.
ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಫೀಲ್ಡ್ ಇನ್‌ಸ್ಪೆಕ್ಷನ್‌ನಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್, ಅಪರ ಆಯುಕ್ತರಾದ ಡಾ. ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು (AEE) ಹಾಗೂ ವಿದ್ಯುತ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆಯುದ್ದಕ್ಕೂ ಬೀದಿ ದೀಪಗಳ ವೈಫಲ್ಯ, ಪಾದಚಾರಿ ಮಾರ್ಗಗಳ (ಫುಟ್‌ಪಾತ್) ದುಃಸ್ಥಿತಿ, ತೆರೆದ ಚರಂಡಿಗಳು ಮತ್ತು ಎಂಜಿನಿಯರ್‌ಗಳ ಹೊಣೆಗೇಡಿತನಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡರು.
ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಗೊಟ್ಟಿಗೆರೆವರೆಗಿನ ಈ ಪ್ರಮುಖ ಮಾರ್ಗದಲ್ಲಿ ಒಟ್ಟು 1,540 ಬೀದಿ ದೀಪಗಳಿದ್ದು, ಇದರಲ್ಲಿ 1,010 ದೀಪಗಳು ಮಾತ್ರ ಉರಿಯುತ್ತಿವೆ. ಬರೋಬ್ಬರಿ 530 ದೀಪಗಳು, ಅಂದರೆ ಶೇಕಡಾ 34ರಷ್ಟು ಬೀದಿ ದೀಪಗಳು ಸಂಪೂರ್ಣವಾಗಿ ಕೆಟ್ಟುಹೋಗಿವೆ ಎಂದು ಸಚಿವರು ಅಂಕಿಅಂಶಗಳ ಸಮೇತ ಬಹಿರಂಗಪಡಿಸಿದರು.
ಕಳೆದ ಸೆಪ್ಟೆಂಬರ್ 7 ಮತ್ತು 15ರಂದು ತಮ್ಮ ಕಚೇರಿಯ ಸಿಬ್ಬಂದಿ ಮೂಲಕ ರಾತ್ರಿ ವೇಳೆ ಸಮೀಕ್ಷೆ ನಡೆಸಲಾಗಿದ್ದು, ಸತತ 11 ದಿನಗಳಿಂದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಜುಲೈ 3 ಮತ್ತು ಆಗಸ್ಟ್ ತಿಂಗಳಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿ, ಈಗಾಗಲೇ ಒಬ್ಬ ಎಂಜಿನಿಯರ್‌ನ್ನು ಅಮಾನತು ಮಾಡಿದ್ದರೂ ಸಹ ಗ್ರೌಂಡ್ ಲೆವೆಲ್‌ನಲ್ಲಿ ಯಾವುದೇ ಸುಧಾರಣೆ ಕಾಣದಿರುವುದನ್ನು ಸಚಿವರು ಗಂಭೀರವಾಗಿ ಆಕ್ಷೇಪಿಸಿದರು.
ಎಲ್‌ಇಡಿ ಲೈಟ್ ಅಳವಡಿಕೆ ಗುತ್ತಿಗೆ ಅವಧಿ ಕಳೆದ ಫೆಬ್ರವರಿಗೆ ಮುಕ್ತಾಯವಾಗಿದ್ದರೂ, ವಿಸ್ತರಿತ ಅವಧಿಯಲ್ಲೂ ಗುತ್ತಿಗೆದಾರರು ಕಾಮಗಾರಿ ಮುಗಿಸಿಲ್ಲ. ರಸ್ತೆಯ ಅಗಲಕ್ಕೆ ತಕ್ಕಂತೆ 120 ವ್ಯಾಟ್ಸ್ ದೀಪಗಳನ್ನು ಅಳವಡಿಸದೆ, 90 ವ್ಯಾಟ್ಸ್ ಹಳೆಯ ದೀಪಗಳನ್ನೇ ಮುಂದುವರಿಸಲಾಗಿದೆ. ಹೈ-ಡೆನ್ಸಿಟಿ ಲೈಟ್‌ಗಳು ಮತ್ತು ಮೀಡಿಯನ್ ದೀಪಗಳು ಉರಿಯುತ್ತಿಲ್ಲ. ಹುಳಿಮಾವು ಬಳಿಯ ಕ್ರೈಸ್ಟ್ ಯೂನಿವರ್ಸಿಟಿ ಮುಂಭಾಗ ಹಾಗೂ ಮೆಗಾ ಸಿಟಿ ಮಾಲ್ ಬಳಿ ರಸ್ತೆಯುದ್ದಕ್ಕೂ ಸಂಪೂರ್ಣ ಕತ್ತಲು ಆವರಿಸಿರುವುದನ್ನು ಅಧಿಕಾರಿಗಳಿಗೆ ತೋರಿಸಿದ ಸಚಿವರು, "ರಾತ್ರಿ ವೇಳೆ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ರೌಂಡ್ಸ್ ಮಾಡುತ್ತಿದ್ದಾರೋ ಅಥವಾ ಕಚೇರಿಯಲ್ಲಿ ಸುಳ್ಳು ರಿಪೋರ್ಟ್ ಸಿದ್ಧಪಡಿಸುತ್ತಿದ್ದಾರೋ? ಕೆಲಸ ಮಾಡದ ಗುತ್ತಿಗೆದಾರರ ದುಪ್ಪಟ್ಟು ದಂಡ ವಿಧಿಸಿ ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲು ಹಿಂಜರಿಯಬೇಡಿ" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
PublicNext
19/09/2026 11:58 am