ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಶೈಕ್ಷಣಿಕ ಪ್ರವಾಸಕ್ಕೆ 12 ನಿಯಮ..ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೆ ಸೆಲ್ಫಿ, ರೀಲ್ಸ್‌ಗೆ ಬ್ರೇಕ್

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಕಾಲೇಜು ಶಿಕ್ಷಣ ಇಲಾಖೆ 12 ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ರೂಪಿಸಲಾಗಿದ್ದು, ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಸೂಚಿಸಿದೆ.

ಇನ್ನು ಮುಂದೆ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಗಳು ಸೆಲ್ಫಿ, ರೀಲ್ಸ್ ಹಾಗೂ ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ. ಪ್ರವಾಸಕ್ಕೆ ತೆರಳುವ ಮುನ್ನವೇ ವಿದ್ಯಾರ್ಥಿಗಳಿಗೆ ಈ ಕುರಿತು ಸೂಚನೆ ನೀಡಬೇಕು. ನಿಯಮ ಉಲ್ಲಂಘನೆಯಾಗದಂತೆ ಜತೆಗಿರುವ ಅಧ್ಯಾಪಕರು ನಿಗಾವಹಿಸಬೇಕು.

ಪ್ರವಾಸ ಕೈಗೊಳ್ಳಲು ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪತ್ರ ಹಾಗೂ ಪೋಷಕರಿಂದ ಅನುಮತಿ ಪತ್ರ ಪಡೆಯಬೇಕು. ಅಲ್ಲದೆ, ಪ್ರವಾಸದ ಮಾಹಿತಿಯನ್ನು ಹೊರಡುವ ಮುನ್ನ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಬೇಕು ಎಂದು ಇಲಾಖೆ ತಿಳಿಸಿದೆ.

ಶೈಕ್ಷಣಿಕ ಪ್ರವಾಸಕ್ಕೆ 12 ನಿಯಮಗಳು:

1. ಇಲಾಖೆಯ ಪೂರ್ವಾನುಮತಿ ಕಡ್ಡಾಯ.

2. ವಿದ್ಯಾರ್ಥಿಗಳ ಮುಚ್ಚಳಿಕೆ ಹಾಗೂ ಪೋಷಕರ ಅನುಮತಿ ಪತ್ರ ಕಡ್ಡಾಯ.

3. ಅನುಮತಿ ಪಡೆದ ಸ್ಥಳಗಳಿಗೆ ಮಾತ್ರ ಭೇಟಿ.

4. ವಿದ್ಯಾರ್ಥಿನಿಯರ ಸುರಕ್ಷತೆಗೆ ವಿಶೇಷ ಕ್ರಮ ಕಡ್ಡಾಯ.

5. ಕನಿಷ್ಠ ಒಬ್ಬ ಖಾಯಂ ಉಪನ್ಯಾಸಕರು ಪ್ರವಾಸದಲ್ಲಿ ಇರಬೇಕು.

6. ನಾಲ್ವರು ಅಧ್ಯಾಪಕರ ಮಿತಿ; ಇಬ್ಬರು ಮಹಿಳಾ ಅಧ್ಯಾಪಕಿಯರು ಹಾಗೂ ಒಬ್ಬ ಗ್ರೂಪ್ ‘ಡಿ’ ನೌಕರರು ಕಡ್ಡಾಯ.

7. ಪ್ರವಾಸದ ಅವಧಿ ಪ್ರಯಾಣದ ದಿನಗಳು ಸೇರಿದಂತೆ ಗರಿಷ್ಠ 5 ದಿನ.

8. ಮಳೆಗಾಲದಲ್ಲಿ ಪ್ರವಾಸಕ್ಕೆ ಅನುಮತಿ ಇಲ್ಲ; ಅಪಾಯಕಾರಿ ಸ್ಥಳಗಳಿಗೆ ಸುರಕ್ಷತಾ ಕ್ರಮ ಕಡ್ಡಾಯ.

9. ಸೆಲ್ಫಿ, ರೀಲ್ಸ್ ಹಾಗೂ ವಿಡಿಯೋ ಚಿತ್ರೀಕರಣ ಸಂಪೂರ್ಣ ನಿಷೇಧ.

10. ಪ್ರವಾಸದ ಮಾಹಿತಿ ಪೊಲೀಸ್ ಠಾಣೆಗೆ ನೀಡುವುದು ಕಡ್ಡಾಯ.

11. ಅನುಮತಿ ಇಲ್ಲದೆ ಸಿಬ್ಬಂದಿ ಸ್ವತಂತ್ರವಾಗಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವಂತಿಲ್ಲ.

12. ಸಂಬಂಧಪಟ್ಟ ವಿಭಾಗದ ಸಿಬ್ಬಂದಿ ಹೊರತುಪಡಿಸಿ ಬೇರೆ ಸಿಬ್ಬಂದಿ ಅನುಮತಿ ಇಲ್ಲದೆ ಪ್ರವಾಸಕ್ಕೆ ತೆರಳುವಂತಿಲ್ಲ.

Edited By :
Kshetra Samachara

Kshetra Samachara

19/09/2026 05:57 pm

Cinque Terre

650

Cinque Terre

0

ಸಂಬಂಧಿತ ಸುದ್ದಿ