ಬೆಂಗಳೂರು : ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು, ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಬಿ.ಎಸ್. ನೇಮಗೌಡ ಹಾಗೂ ಉಪ ಪೊಲೀಸ್ ಆಯುಕ್ತರು (ಸಂಚಾರ) ಜಯಪ್ರಕಾಶ್ ಅವರು, ಮಲ್ಲೇಶ್ವರ ವಿಭಾಗದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಸಂಬಂಧ ಟಾಸ್ಕ್ ಫೋರ್ಸ್ ರಚಿಸುವ ಕುರಿತು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಪಾಲಿಕೆ ಕಚೇರಿಯಲ್ಲಿ ಇಂದು ಸಭೆ ನಡೆಸಿದರು.
ಮಲ್ಲೇಶ್ವರ ವಿಭಾಗದ ವಾಣಿಜ್ಯ ರಸ್ತೆಗಳಾದ ಸಂಪಿಗೆ ರಸ್ತೆ ಮತ್ತು ಮಾರ್ಗೋಸಾ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಮರು ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಬೇಕು. ಅಲ್ಲದೆ, ವಿಭಾಗದ ಮುಖ್ಯ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿರುವ ಒತ್ತುವರಿದಾರರನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಯೋಜಿತ ಪ್ರಯತ್ನ ಅಗತ್ಯ ಎಂದು ಆಯುಕ್ತರು ಹೇಳಿದರು.
ಬೀದಿವ್ಯಾಪಾರಿಗಳ ಹಿತಾಸಕ್ತಿ ಕಾಯುವುದು ಕೂಡ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯ ರಸ್ತೆಗಳು, ಸಂಪರ್ಕ ರಸ್ತೆಗಳು ಹಾಗೂ ಜಂಕ್ಷನ್‌ಗಳಿಂದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕು. ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಸೂಚಿಸಿದರು.
ಮರು ಒತ್ತುವರಿ ಮಾಡುವವರಿಗೆ ದಂಡ ವಿಧಿಸಬೇಕು. ಮತ್ತೆ ಒತ್ತುವರಿ ಮಾಡಿದಲ್ಲಿ ವಿಡಿಯೋ ದಾಖಲೀಕರಣ ಮಾಡಿ, ವಸ್ತುಗಳನ್ನು ಜಪ್ತಿ ಮಾಡಬೇಕು. ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿದವರು, ಪಾದಚಾರಿ ಸುರಕ್ಷತೆಗೆ ತೊಂದರೆ ಮಾಡಿದವರು ಹಾಗೂ ವ್ಯಾಪಾರ ಪರವಾನಗಿ ಇಲ್ಲದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಾಹನ ಸಂಚಾರ ಮತ್ತು ಜನಸಂಚಾರಕ್ಕೆ ತೊಂದರೆಯಾಗುವಂತಿದ್ದರೆ ಕ್ರಮ ಕೈಗೊಳ್ಳಬೇಕು. ಪಾದಚಾರಿ ಮಾರ್ಗ ಹಾಳಾಗಿದ್ದರೆ ಸರಿಪಡಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಟೋಯಿಂಗ್ ವಾಹನ ಸುತ್ತು ಹಾಕುವ ಮೂಲಕ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡದಂತೆ ಸಾರ್ವಜನಿಕರಲ್ಲಿ ಎಚ್ಚರ ಮೂಡಿಸುತ್ತಿರಬೇಕು ಎಂದರು.
ಈ ಸಂದರ್ಭದಲ್ಲಿ ಪಾಲಿಕೆಯ ವಲಯ-1ರ ಮುಖ್ಯ ಅಭಿಯಂತರರಾದ ಸ್ವಯಂಪ್ರಭಾ, ವಲಯ-2ರ ಮುಖ್ಯ ಅಭಿಯಂತರರಾದ ಜಯಶಂಕರ್, ಬೆಂಗಳೂರು ಕೇಂದ್ರ ಪಾಲಿಕೆಯ ಮುಖ್ಯ ಅಭಿಯಂತರರಾದ ವಿಜಯ ಕುಮಾರ್ ಹರಿದಾಸ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಭಾಗ್ಯವತಿ ಮತ್ತು ಪೂಣಚ್ಚ, ಕಾರ್ಯಪಾಲಕ ಅಭಿಯಂತರರು ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
Kshetra Samachara
18/09/2026 07:38 pm