ಬೆಳಗಾವಿ : ಲಿಂಗಾಯತ ಧರ್ಮದ ತತ್ವಗಳನ್ನು ಸರ್ವಸಾಮಾನ್ಯರಿಗೆ ತಿಳಿಸುವುದು ಹಾಗೂ ಲಿಂಗಾಯತ ತತ್ವಗಳ ಆಚರಣೆಯ ಮೂಲಕ ಧರ್ಮದ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ಅವರು ಬೆಳಗಾವಿಯ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆರಂಭವಾದ ಎರಡು ದಿನಗಳ ಜಾಗತಿಕ ಲಿಂಗಾಯತ ಮಹಾಸಭೆಯ ವಾರ್ಷಿಕ ಸರ್ವಸಾಮಾನ್ಯ ಸಭೆ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಲಿಂಗಧಾರಣೆ, ರುದ್ರಾಕ್ಷಿ ಧಾರಣೆ, ಲಿಂಗಪೂಜೆ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಆಚರಣೆಯಲ್ಲಿ ತರುವ ಮೂಲಕ ಹಾಗೂ ಲಿಂಗಾಯತ ತತ್ವಗಳ ಪರಿಣಾಮಕಾರಿ ಪ್ರಚಾರದ ಮೂಲಕ ಮಾತ್ರ ಲಿಂಗಾಯತ ಸ್ವತಂತ್ರ ಧರ್ಮದ ವಿರೋಧ ಮಾಡುವವರ ಮನ ಪರಿವರ್ತನೆ ಮತ್ತು ವಿರೋಧವನ್ನು ಕಡಿಮೆ ಮಾಡಲು ಸಾಧ್ಯ ಎಂದವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್, ಅಂತರರಾಷ್ಟ್ರೀಯ ಬಸವ ಕೇಂದ್ರದ ಕಟ್ಟಡ ಸಿದ್ಧವಾಗಿ 22 ವರ್ಷಗಳಾಗಿದ್ದು, ಅಲ್ಲಿ ಯಾವುದೇ ಬಸವಪರ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಅದೇ ರೀತಿ ಸಿದ್ದರಾಮಯ್ಯನವರ ಕಾಲದಲ್ಲಿ ₹560 ಕೋಟಿ ವೆಚ್ಚದಲ್ಲಿ ಆರಂಭವಾದ ಅನುಭವ ಮಂಟಪದ ಬೃಹತ್ ಕಟ್ಟಡದ ಕಾಮಗಾರಿ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ನಂತರ ಅಲ್ಲಿ ಯಾವ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಕುರಿತು ಎರಡು ದಿನಗಳ ಸಭೆಯಲ್ಲಿ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
900 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದ ಅನುಭವ ಮಂಟಪದ ಉದ್ದೇಶ ಏನಿತ್ತು ಮತ್ತು ಈಗ ಬದಲಾಗಿರುವ ವಾತಾವರಣದ ಹಿನ್ನೆಲೆಯಲ್ಲಿ ಅನುಭವ ಮಂಟಪದಲ್ಲಿ ಯಾವ ಕಾರ್ಯಕ್ರಮಗಳು ಹಾಗೂ ಯಾವ ಮಾದರಿಯ ಚಟುವಟಿಕೆಗಳು ನಡೆಯಬೇಕು, ಪ್ರಸ್ತುತ ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬುದನ್ನು ಸಭೆ ನಿರ್ಧರಿಸಬೇಕಿದೆ ಎಂದರು.
ಲಿಂಗಾಯತ ಧರ್ಮದ ಬೇಡಿಕೆಗಾಗಿ ನಡೆದ ಕಾರ್ಯಕ್ರಮಗಳು ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸ್ವಾಮೀಜಿಗಳ ವಿರುದ್ಧ ಹಲವಾರು ಸ್ವಾಮೀಜಿಗಳೇ ಅವಾಚ್ಯ ಶಬ್ದಗಳಲ್ಲಿ ಟೀಕಿಸಿದ್ದಾರೆ. ಲಿಂಗಾಯಿತರ ವಿರುದ್ಧ ಚಟುವಟಿಕೆಗಳಿಗಾಗಿ ಲಿಂಗಾಯಿತರನ್ನು ಬೆಳೆಸಿಕೊಳ್ಳುವ ಕುರಿತು ಪ್ರಸ್ತಾಪಿಸಿದ ಡಾ. ಜಾಮದಾರ್, ಅದಕ್ಕೆಲ್ಲ ದಾಖಲೆಗಳ ಸಮೇತ ಉತ್ತರ ನೀಡಲಾಗಿದೆ. ಇಂಥ ವಿಚಾರಗಳಿಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಎನ್.ಎಸ್. ಕೆಂಪೇಗೌಡ ವಹಿಸಿದ್ದರು. ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಮುರುಗೇಶ್ ಶಿವಪೂಜಿ ವಂದಿಸಿದರು. ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ನಿರ್ವಹಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷರಾದ ಗೊಂಗಡ ಶೆಟ್ಟರ್, ಮಹದೇವಪ್ಪ, ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ. ಕೊಂಗವಾಡ, ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳಾದ ಬಸವರಾಜ್ ಧನ್ನೂರ್, ಜಿ.ಬಿ. ಹಲ್ಯಾಳ, ಪರಮೇಶ್ವರಪ್ಪ ಕಾಗಿನೆಲೆ, ಸವಿತಾ ನಡಕಟ್ಟಿ, ಪ್ರಭಣ್ಣ ನಡಕಟ್ಟಿ, ರಾಜಶೇಖರ್ ತಂಬಾಕೆ, ಬಸವರಾಜ್ ಕಣಜೆ, ಗವಿ ಸಿದ್ದಪ್ಪ, ಜಿಲ್ಲಾ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಸಿ.ಎಂ. ಬೂದಿಹಾಳ, ಎಸ್.ಜಿ. ಸಿದ್ನಾಳ, ಪ್ರವೀಣ್ ಚಿಕ್ಕಲಿ, ಚಿನುಗುಡಿ ಹಾಗೂ ಎಫ್.ಆರ್. ಪಾಟೀಲ್ ಉಪಸ್ಥಿತರಿದ್ದರು.
ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಪದಾಧಿಕಾರಿಗಳಾದ ರತ್ನಾ ಬೆಣಚಿನಮರಡಿ, ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ ಹಾಗೂ ಅನಸೂಯ ಬಶೆಟ್ಟಿ ಅವರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಜಗದ್ಗುರು ಬಸವಣ್ಣನವರ ಪುತ್ತಳಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ಪ್ರಕಟವಾದ ‘ಅನುಭವ ಮಂಟಪ ಮುಂದೇನು?’, ‘ಲಿಂಗಾಯತ ಧರ್ಮದ ಆಚರಣೆಗಳು’ ಹಾಗೂ ಮರಾಠಿ ಭಾಷೆಯ ‘ಲಿಂಗಾಯತ್ ಸ್ವತಂತ್ರ ಧರ್ಮಚ್’ ಎಂಬ ಮೂರು ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ ನೂರಾರು ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
PublicNext
19/09/2026 05:03 pm